ಮುಸ್ಕಾನ್‍ಳನ್ನು ತನಿಖೆಗೆ ಒಳಪಡಿಸುವಂತೆ ಸಿಎಂಗೆ ಪತ್ರ ಬರೆದ ಅನಂತ್‍ಕುಮಾರ್ ಹೆಗಡೆ.

63
firstsuddi

ಕಾರವಾರ : ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಳನ್ನು ತನಿಖೆಗೆ ಒಳಪಡಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಈ ಹಿಂದೆ ಹಿಜಾಬ್ ವಿವಾದ ತಾರಕಕ್ಕೇರಿದ್ದ ಸಂದರ್ಭದಲ್ಲಿ ಮಂಡ್ಯದ ಪಿ.ಇ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಇದಕ್ಕುತ್ತರವಾಗಿ ಬೀಬಿ ಮುಸ್ಕಾನ್ ಎಂಬ ಬುರ್ಖಾಧಾರಿ ವಿದ್ಯಾರ್ಥಿನಿಯು ‘ಅಲ್ಲಾಹು ಅಕ್ಟರ್’ ಎಂದು ಕೂಗಿದ್ದ ವಿಡಿಯೋ ಜಗತ್ತಿನೆಲ್ಲಡೆ ಪ್ರಮುಖ ನ್ಯೂಸ್ ಚಾನೆಲ್ ಗಳಲ್ಲಿ ಪ್ರಸಾರವಾಗಿ, ವಿದ್ಯಾರ್ಥಿನಿಯು ದಿಢೀರ್ ಪ್ರಸಿದ್ಧಿಯನ್ನು ಪಡೆದಿದ್ದ ಘಟನೆ ನಡೆದಿತ್ತು.

ಈ ವಿದ್ಯಾರ್ಥಿನಿಗೆ ಹಲವಾರು ಮುಸ್ಲಿಂ ಸಂಘಟನೆಗಳಿಂದ ಪ್ರಶಂಸೆಯ ನುಡಿಗಳು ಹಾಗೂ ಬಹುಮಾನಗಳ ಘೋಷಣೆ ಮಾಡಲಾಗಿತ್ತು. ಹೀಗಿರುವಾಗ ನಿಷೇಧಿತ ಮುಸ್ಲಿಂ ಭಯೋತ್ಪಾದಕ ಸಂಘಟನೆಯಾದ ಆಲ್-ಖೈದಾದ ಮುಖ್ಯಸ್ಥನಾದ ಆಯಮನ್-ಅಲ್-ಜವಾಹರಿ ಇತ್ತೀಚೆಗೆ ಈ ವಿದ್ಯಾರ್ಥಿನಿಯ ಕುರಿತು ‘ಭಾರತದ ಸರ್ವಶ್ರೇಷ್ಠ ಮಹಿಳೆ’ ಎಂದು ಹೊಗಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿದೆ. ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ತೀರ್ಪು ನೀಡಿದ್ದರೂ ಸಹಿತ ಹಲವಾರು ರಾಜಕಾರಣಿಗಳು, ಮೂಲಭೂತವಾದಿ ಸಂಘಟನೆಗಳು ಹಾಗೂ ವಿದ್ಯಾರ್ಥಿನಿಯರು ಉಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದಾರೆ.

ಹಿಜಾಬ್ ಪ್ರತಿಭಟನೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಉಚ್ಚ ನ್ಯಾಯಲಯ ಪೀಠವು ಅಭಿಪ್ರಾಯ ವ್ಯಕ್ತಪಡಿಸಿರುವುದು ಇಲ್ಲಿ ಉಲ್ಲೇಖನೀಯವಾಗಿದೆ. ಕಾರಣ ಬೀಬಿ ಮುಸ್ಕಾನ್ ವಿದ್ಯಾರ್ಥಿನಿಗೆ ಹಿಜಾಬ್ ಷಡ್ಯಂತ್ರದ ಹಿಂದಿರುವ ಕಾಣದ ಕೈಗಳು ಮತ್ತು ನಿಷೇಧಿತ ಸಂಘಟನೆಗಳೊಂದಿಗೆ ಇರುವ ಸಂಬಂಧದ ಕುರಿತಂತೆ ಕೂಲಂಕುಷವಾದ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಮುಖ್ಯಮಂತ್ರಿಗೆ ಸಂಸದ ಅನಂತಕುಮಾರ್ ಹೆಗಡೆ ಒತ್ತಾಯಿಸಿದ್ದಾರೆ.