ಮೂಡಿಗೆರೆ : ದುಡಿಮೆಗಾಗಿ ಮಹಾನಗರಗಳಿಗೆ ಅಥವಾ ಇನ್ನಿತರೆ ಪ್ರದೇಶಗಳಿಗೆ ತೆರಳಿ ಕೊರೋನಾ ವೈರಸ್ ಭೀತಿಯಿಂದ ಅಥವಾ ಸರ್ಕಾರದ ಲಾಕ್ಡೌನ್ ಆದೇಶಕ್ಕೆ ಬೆಚ್ಚಿಬಿದ್ದು ತವರಿಗೆ ಮರಳಿದವರ ಮೇಲೆ ತೀವ್ರ ನಿಗಾ ವಹಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.
ತಮ್ಮ ಜೀವನ ಕಟ್ಟಿಕೊಳ್ಳಲು ತಾವು ಹುಟ್ಟಿಬೆಳೆದ ಊರನ್ನು ತೊರೆದು ಪಟ್ಟಣ ಸೇರಿ ಜೀವನ ಕಂಡುಕೊಂಡಿದ್ದ ಕಾಫಿನಾಡಿನ ಹಲವರು ತಮ್ಮ ತವರಿಗೆ ಮರಳಿದ್ದಾರೆ. ಒಂದು ವಾರದಿಂದಲೂ ನಿರಂತರವಾಗಿ ಊರಿನ ಕಡೆ ಮುಖ ಮಾಡುತ್ತಿದ್ದಾರೆ. ಬಹುತೇಕ ಮಂದಿ ತಮ್ಮ ಗೂಡು ಸೇರಿಕೊಂಡರೆ, ಇನ್ನು ಕೆಲವರು ಅಡ್ಡದಾರಿಗಳ ಮೂಲಕ ಮನೆ ಸೇರುತ್ತಿದ್ದಾರೆ. ಹೀಗೆ ಹೊರಗಿನಿಂದ ಬಂದ ಜನರಲ್ಲಿ ಅನೇಕೆರಿಗೆ ಕೊರೋನಾ ವೈರಸ್ ಸೋಂಕು ಇರಬಹುದು ಎನ್ನುವ ಭೀತಿ ಇಲ್ಲಿನ ಸ್ಥಳೀಯರದ್ದು.
ನಾನು ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಪಿಜಿಯೊಂದರಲ್ಲಿ ಉಳಿದುಕೊಂಡಿದ್ದ ನಾನು ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಊರಿಗೆ ಬರಲೇ ಬೇಕಾಗಿದ್ದರಿಂದ ಮನೆಗೆ ಹಿಂತಿರುಗಬೇಕಾಯಿತು. ನನ್ನ ರೀತಿಯಲ್ಲಿಯೇ ಬೆಂಗಳೂರಿನ ಫ್ಯಾಕ್ಟರಿಗಳು, ಗಾರ್ಮೆಂಟ್ಸ್, ಐಟಿ-ಬಿಟಿ ಕಂಪೆನಿಗಳು ಸೇರಿದಂತೆ ಕೆಲಸ ಮಾಡುತ್ತಿರುವ ಸಾವಿರಾರು ಮಂದಿ ಮನೆಗೆ ತೆರಳಬೇಕಾಗಿತ್ತು. ಊರಿಗೆ ಮರಳುವ ವೇಳೆ ಗುಂಪುಗುಂಪಾಗಿ ಬಂದಿದ್ದರಿಂದ ಒಬ್ಬರ ನಡುವೆ ಮತ್ತೊಬ್ಬರು ಅಂತರ ಕಾಯ್ದುಕೊಳ್ಳಲು ಸಾಧ್ಯವಿರಲಿಲ್ಲ. ಕೊರೋನಾ ಸೋಂಕಿನ ಹರಡುವ ಭಯದಿಂದ ದಾರಿ ಮಧ್ಯದಲ್ಲಿ ಏನನ್ನೂ ತಿನ್ನದೆ-ಕುಡಿಯದೆ ಮುಖದ ತುಂಬೆಲ್ಲಾ ಬಟ್ಟೆಕಟ್ಟಿಕೊಂಡು ಊರು ಸೇರಿದೆವು. ಮನೆಗ ಬಂದ ನಂತರದಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಕೊರೋನಾ ಸೋಂಕು ಅಂಟಿದ್ದರೆ ಕಷ್ಟ ಎಂದು ಎಚ್ಚರ ವಹಿಸುತ್ತಿದ್ದೇವೆ. ನಿಜಕ್ಕೂ ಇದೊಂದು ಮರೆಯಲಾಗದ ಕಹಿ ನೆನಪು ಎಂದು ಪಟ್ಟಣದ ಸನ್ನಿಧಿ ಲೇಔಟ್ನ ಶೇಖರ್ ಪ್ರಸಾದ್ ಅವರು ಮಾಹಿತಿ ಹಂಚಿಕೊಂಡರು.
ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಕಂಡುಕೊಂಡಿದ್ದೆ. ಸದ್ಯ ಗಾರ್ಮೆಂಟ್ಸ್ ಮುಚ್ಚಿರುವುದರಿಂದ ಅನಿವಾರ್ಯವಾಗಿ ಊರಿಗೆ ಮರಳಬೇಕಾಗಿದೆ. ಬಡ ಕುಟುಂಬ ನಮ್ಮದು ದುಡಿಮೆಯ ಹಣದಲ್ಲಿ ಅರ್ಧಭಾಗವನ್ನು ಮನೆಗೆ ಕಳುಹಿಸುತ್ತಿದ್ದೆ. ಇದೀಗ ಎಲ್ಲೆಲ್ಲೂ ಕೊರೋನಾ ಸೋಂಕಿನ ಭೀತಿ ಆವರಿಸಿದೆ. ಊರಿಗೆ ಮರಳುವಾಗ ಜನಸಂದಣಿ ದಟ್ಟವಾಗಿತ್ತು. ಜನಸಂದಣಿಯ ಮಧ್ಯೆ ಯಾರಿಗೆ ಸೋಂಕು ಇದೆ ಎನ್ನುವ ಮಾಹಿತಿ ಯಾರಿಗೂ ಇರಲು ಸಾಧ್ಯವಿಲ್ಲ. ಪಕ್ಕದಲ್ಲಿ ಯಾರಾದರೂ ಕೆಮ್ಮುವುದು, ಸೀನುವುದು ಮಾಡಿದರೆ ಬೆಚ್ಚಿ ಬೀಳುವಂತೆ ಭಾಸವಾಗುತ್ತಿತ್ತು. ಮನೆಗೆ ಬಂದ ಮೇಲೆ ಮುಂಜಾಗೃತಾ ಕ್ರಮವಾಗಿ 14 ದಿನಗಳ ಸ್ವಯಂ ನಿರ್ಭಂಧ ಹೇರಿಕೊಳ್ಳುವ ನಿರ್ಧಾರ ಕೈಗೊಂಡು ಎಚ್ಚರಿಕೆ ವಹಿಸಿದ್ದೇವೆ. ನಮ್ಮ ರೀತಿಯಲ್ಲಿಯೇ ಎಲ್ಲರೂ ಇರುತ್ತಾರೆ ಎಂದು ಭಾವಿಸಲಾಗದು. ಆದುದರಿಂದ ತಾಲ್ಲೂಕು ಆಡಳಿತ ಎಚ್ಚರ ವಹಿಸಿ ಇಂಥಹವರ ಮೇಲೆ ತೀವ್ರ ನಿಗಾ ವಹಿಸುವುದು ಸೂಕ್ತ ಎಂದು ಮನವಿ ಮಾಡಿದರು.
ಊರುಗಳಿಗೆ ವಾಪಾಸ್ಸಾಗಿರುವ ಅನೇಕರಲ್ಲಿ ಇನ್ನೂ ತಾವೂ ಪರ ಊರಿನಲ್ಲಿ ಇದ್ದೇವೆ ಎಂಬ ಮನೋಭಾವನೆ ಇದ್ದು, ಬೆಳಗ್ಗೆ ಎದ್ದು ಜಾಗಿಂಗ್ ಅಥವಾ ವಾಯುವಿಹಾರಕ್ಕೆ ಹೊರಡುವುದು ಮಾಡುವುದರ ಜೊತೆಗೆ ರಸ್ತೆ ಖಾಲಿ ಇರುವುದುರಿಂದ ಬೈಕ್ಗಳಲ್ಲಿ ಜಾಲಿ ರೈಡ್ ತೆರಳುತ್ತಿರುವುದು ಸಾಮಾನ್ಯವಾಗಿದೆ. ಪೋಲೀಸರು ಎಷ್ಟೇ ಕಟ್ಟೆಚ್ಚರ ವಹಿಸಿ ಸೂಚನೆ ನೀಡಿದರೂ ಕೆಲವರು ಬಗ್ಗುತ್ತಿಲ್ಲ. ಸ್ಥಳೀಯರು ಅಥವಾ ಅಕ್ಕಪಕ್ಕದವರು ಬುದ್ಧಿವಾದ ಹೇಳಿದರೆ ಮೈ ಮೇಲೆ ಎರಗುತ್ತಿರುವುದು ಸ್ಥಳೀಯರ ತಲೆನೋವಿಗೆ ಕಾರಣವಾಗಿದೆ.
ಈ ಬಗ್ಗೆ ತೀಕ್ಷ್ಣವಾಗಿ ಆರೋಪ ಮಾಡಿರುವ ನಾಗರೀಕರು ತಾಲ್ಲೂಕು ಆಡಳಿತ ಮನೆಗೆ ಒಂದರಂತೆ ಪಾಸ್ ನೀಡಿ ಒಬ್ಬರಿಗೆ ಮಾತ್ರ ಅವಶ್ಯಕ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ನೀಡಬೇಕು. ಆನ್ಲೈನ್ ಮೂಲಕ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿದ ಬಳಿಕ ಪ್ರತೀ ಮನೆಗೊಂದರಂತೆ ಪಾಸ್ ನೀಡುವ ವ್ಯವಸ್ಥೆ ಮಾಡದ ಹೊರತು ನಮ್ಮ ಜನಗಳಿಗೆ ಬುದ್ದಿ ಬಾರದು ಎಂಬುವುದು ಬಹುತೇಕರ ಅಭಿಪ್ರಾಯವಾಗಿದೆ.










