ಕೊಟ್ಟಿಗೆಹಾರ : ಕೀಟ ಜಗತ್ತು ವಿಸ್ಮಯಗಳ ಗಣಿಯಾಗಿದ್ದು ವೈವಿದ್ಯಮಯ ಕೀಟಗಳ ವಿಸ್ಮಯಲೋಕ ಬೆರಗು ಮೂಡಿಸುವಂತಹದ್ದು ಎಂದು ಮೂಡಿಗೆರೆಯ ಕೀಟ ವಿಜ್ಞಾನಿ ಡಾ. ರೇವಣ್ಣನವರು ಹೇಳಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ನಡೆದ ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ತೇಜಸ್ವಿ ಮತ್ತು ಡಾ. ವಿ.ವಿ ಬೆಳವಾಡಿ ಅವರು ಬರೆದ ನಡೆಯುವ ಕಡ್ಡಿ ಹಾರುವ ಎಲೆ ಕೃತಿಯ ಬಗ್ಗೆ ಅವರು ಮಾತನಾಡಿದರು.
ಕೀಟಗಳು ತಾವು ಅನುಸರಿಸುವ ರಕ್ಷಣಾ ತಂತ್ರಗಳು ಬೆರಗು ಮೂಡಿಸುತ್ತವೆ. ಕೀಟ ಭಕ್ಷಕ ಜೀವಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎಲೆಯ ರೂಪ ತೊಟ್ಟ ಎಲೆಯ ಹುಳು. ಕಡ್ಡಿಯ ಆಕಾರದಲ್ಲಿರುವ ಕೀಟ. ಹೀಗೆ ಪ್ರಕೃತಿಯ ವೈಚಿತ್ರ್ಯಗಳು ಕೀಟ ಜಗತ್ತಿನೊಳಗಿದೆ. ನಮ್ಮ ಮನೆಯಲ್ಲಿ ಇರುವ ಜಿರಲೆ, ಜೇಡ ಮುಂತಾದ ಕೀಟಗಳನ್ನು ದೇಹದ ರಚನೆಯಿಂದ ಹಿಡಿದು ಜೀವನಕ್ರಮದವರೆಗೆ ಓಡಾಎಉವ ವಿಸ್ಮಯಗಳೆನ್ನಬಹುದು ಎಂದರು.
ಎಲ್ಲಾ ಸನ್ನಿವೇಶ ವಾತಾವರಣಗಳಿಗೂ ಹೊಂದಿಕೊಂಡು ಬದುಕ ಬಲ್ಲ ಒಂದಲ್ಲ ಒಂದು ಕೀಟ ನಮಗೆ ಕಾಣಸಿಗುತ್ತದೆ. ನೋಡಲು ಕ್ಷುದ್ರ ಜೀವಿಗಳಂತೆ ಚಿಕ್ಕದಾಗಿರುವ ಹುಳು ಹುಪ್ಪಟೆಗಳ ಜೀವನವನ್ನು ಗಮನಿಸಿದರೆ ಅಲ್ಲೊಂದು ಅಚ್ಚರಿಯ ವಿಶ್ವರೂಪದ ದರ್ಶನವಾಗುತ್ತದೆ. ಕೀಟಗಳು ವಾತಾವರಣದ ಎಲ್ಲ ರೌದ್ರಾವತಾರಗಳನ್ನೂ ಎದುರಿಸಿ ಹೊಂದಾಣಿಕೆ ಮಾಡಿಕೊಳ್ಳುತ್ತ ಬದುಕುವಲ್ಲಿ ಯಶಸ್ವಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಚಿತ್ರ ಕಲಾವಿದರಾದ ಸುರೇಶ್ ಚಂದ್ರ ದತ್ತ, ಬಾಪು ದಿನೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಕಾರ್ಯಕ್ರಮದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಸ್ಯಾಮ್ಯುಯೆಲ್ ಹ್ಯಾರಿಸ್, ಪ್ರಜ್ವಲ್, ಪ್ರತಿಷ್ಠಾನದ ಸಿಬ್ಬಂದಿ ಸತೀಶ್ ಇದ್ದರು.










