ಮೂಡಿಗೆರೆ : ಕೋಳೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಹೊನ್ನಮ್ಮ ಹಾಗೂ ಚಿನ್ನಮ್ಮ ದೇವಿಯ ದೇವಾಲಯ ಲೋಕಾರ್ಪಣೆ…

1008
firstsuddi

ಮೂಡಿಗೆರೆ : ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಹೊನ್ನಮ್ಮ ಹಾಗೂ ಶ್ರೀ ಚಿನ್ನಮ್ಮ ದೇವಿಯ ದೇವಾಲಯ ಇಂದು ಲೋಕಾರ್ಪಣೆಗೊಂಡಿತು.
ಸುಮಾರು 350 ಕ್ಕೂ ಹೆಚ್ಚು ಹಳೆಯದಾದ ದೇವಿಯರ ದೇವಸ್ಥಾನ ಕಾಲದ ಹೊಡೆತಕ್ಕೆ ಸಿಕ್ಕು ಪೂಜೆ ಪುರಸ್ಕಾರಗಳಿಲ್ಲದೆ ಪಾಳು ಬಿದ್ದಿತ್ತು. ಪಾಳು ಬಿದ್ದಿದ್ದ ಗುಡಿಯಲ್ಲಿಯೇ ಸ್ಥಳೀಯರು ಹಾಗೂ ಗ್ರಾಮಸ್ಥರು ತಮಗೆ ತೋಚಿದಂತೆ ಪೂಜೆಗಳನ್ನು ನಡೆಸಿಕೊಂಡು ಬರುತ್ತಿದ್ದರು. ಅದರಲ್ಲೂ ಸುಗ್ಗಿ ಹಬ್ಬದ ಕಾಲದಲ್ಲಿ ಹನುಮನ ಹಳ್ಳಿಗೆ ಕೋಳೂರಿನಿಂದ ದೇವಿಯರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ವಿಶೇಷ ಪೂಜೆಗಳೊಂದಿಗೆ ಹಬ್ಬ ಆಚರಿಸಿ ಸುಗ್ಗಿ ಮುಗಿದ ನಂತರ ಕೋಳೂರಿಗೆ ಕರೆತಂದು ದೇವಾಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತಿತ್ತು. ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಅಥವಾ ಗ್ರಾಮದಲ್ಲಿ ಯಾವುದೇ ಸಂಭ್ರಮ ಸಡಗರ ಆದಾಗ ಇರುವ ಪುಟ್ಟ ಗುಡಿಯಲ್ಲಿಯೇ ತಮ್ಮ ಪ್ರಥಮ ಪೂಜೆಯನ್ನು ದೇವಿಯರಿಗೆ ಸಲ್ಲಿಸಿ ಮುಂದುವರೆಯುತ್ತಿದ್ದರು.

ಆದರೆ ಏನೇ ಕಷ್ಟಪಟ್ಟು ಕೆಲಸ ಮಾಡಿದರೂ ತಕ್ಕ ಪ್ರತಿಫಲ ದೊರಕದಿರುವುದು, ಕೆಲವು ಅನಿಷ್ಠ ಘಟನೆಗಳು ನಡೆಯುವುದನ್ನು ಕಂಡ ಸ್ಥಳೀಯರು ಹಾಗೂ ಗ್ರಾಮಸ್ಥರು ಹಿರಿಯರ ಸಮ್ಮುಖದಲ್ಲಿ ಅಷ್ಟಮಂಗಳ ಪ್ರಶ್ನೆ ಹಾಕಿಸಿದಾಗ ದೇವಸ್ಥಾನ ನಿರ್ಮಾಣ ಹಾಗೂ ಪುನರ್ ಪ್ರತಿಷ್ಠಾಪನೆ ವಿಚಾರ ಕಂಡು ಬಂದಿತ್ತು. ಕೂಡಲೇ ಗ್ರಾಮಸ್ಥರೆಲ್ಲರೂ ಸಭೆ ಸೇರಿ ದೇವಾಲಯದ ಜೀರ್ಣೋದ್ಧಾರ ಹಾಗೂ ದೇವಿಯರ ಪುನರ್ ಪ್ರತಿಷ್ಠಾಪನೆ ಮಾಡುವುದಾಗಿ ನಿರ್ಧಾರ ಕೈಗೊಂಡು ಒಂದು ವರ್ಷದ ಒಳಗಾಗಿ ದೇವಾಲಯದ ಪುನರ್ ನಿರ್ಮಾಣ ಹಾಗೂ ಹೊನ್ನಮ್ಮ ಮತ್ತು ಚಿನ್ನಮ್ಮ ದೇವಿಯರ ಪ್ರತಿಷ್ಠಾಪನೆ ಕಾರ್ಯವನ್ನು ಶಾಸ್ತ್ರೋಕ್ತವಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವಾರ ಸಂಜೆ ದೇವಾಲಯದಲ್ಲಿ ಸಾಯಂಕಾಲ ಸ್ವಸ್ತಿ ಪುಣ್ಯಾರ್ಚನೆ, ಪ್ರಸಾದ ಶುದ್ಧಿ, ಗೋಪೂಜೆ, ಬಿಂಬ ಶುದ್ಧಿ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ಮೃತ್ಯುಂಜಯ ಹೋಮ, ದಿಕ್ಪಾಲಕ ಬಲಿ, ಅಷ್ಟ ದಿಘ್ಭಂಧನ ಮುಂತಾದ ಪ್ರಾಕಾರಗಳನ್ನು ನೆರವೇರಿಸಲಾಯಿತು. ನಂತರ ಶುಕ್ರವಾರ ಬೆಳಿಗ್ಗೆ ಗಣಪತಿ ಹೋಮ, ಬಿಂಬ ಪ್ರತಿಷ್ಠೆ, ದೇವಿಗೆ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ ನೆರವೇರಿಸಲಾಯಿತು. ಶಾಸ್ತ್ರೋಕ್ತವಾದ ಪೂಜೆಯ ಪ್ರಾಕರಗಳು ನಂತರ ಆಗಮಿಸಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಮಾಡಲಾಯಿತು.
ವಿಜೃಂಭಣೆಯಿಂದ ನಡೆದ ಸಮಾರಂಭದಲ್ಲಿ ಸೇವಾ ಸಮಿತಿ ಅಧ್ಯಕ್ಷ ಕೆ.ಸಿ.ಶಿವಕುಮಾರ್, ಉಪಾಧ್ಯಕ್ಷ ಕೆ.ಸಿ. ವಸಂತಕುಮಾರ್, ಪ್ರಧಾನ ಕಾರ್ಯದರ್ಶಿ, ಕೆ.ಬಿ ಚಿದಂಬರ್, ಕಾರ್ಯದರ್ಶಿ ಸುರೇಂದ್ರ, ಖಜಾಂಜಿ ಕೆ.ಹೆಚ್.ನವೀನ್, ಸದಸ್ಯರುಗಳಾದ ಸುಬ್ಬೇಗೌಡ, ವೇತನ್, ಮಂಜುನಾಥ್, ಅಣ್ಣೇ ಗೌಡ, ರತ್ನಮ್ಮ, ಸತೀಶ್, ಸಂದೀಪ್, ಗೋಪಾಲ ಗೌಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸ್ಥಳೀಯರು ಹಾಜರಿದ್ದರು.