ಮೂಡಿಗೆರೆ : ಜನರು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಅವುಗಳನ್ನು ಹೆಚ್ಚು ಹೆಚ್ಚು ನಡೆಸಲು ಉತ್ತೇಜನ ನೀಡಬೇಕು : ಗೀತಾ

195
firstsuddi

ಮೂಡಿಗೆರೆ : ಮೂಡಿಗೆರೆ ಬಾಳೂರು ಹೋಬಳಿಯ ಜಾವಳಿಯ ಹೇಮಾವತಿ ಕ್ರೀಡಾಂಗಣದಲ್ಲಿ ಭಾನುವಾರದಂದು ಹೇಮಾವತಿ ರೈಡರ್ಸ್ ವತಿಯಿಂದ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಜಾವಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಟೇಪು ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಖೋಖೋ ಮತ್ತಿತರ ಕ್ರೀಡೆಗಳಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ. ಆಧುನಿಕತೆಯ ಯುಗದಲ್ಲಿ ಮೊಬೈಲ್ ಆಟಗಳಿಗೆ ಮಾರು ಹೋಗಿ ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ. ಜನರು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಅವುಗಳನ್ನು ಹೆಚ್ಚು ಹೆಚ್ಚು ನಡೆಸಲು ಉತ್ತೇಜನ ನೀಡಬೇಕು. ಶಾಲೆಗಳಲ್ಲಿ ಮಾತ್ರ ಈ ರೀತಿಯ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಾಗುತ್ತಿದೆ. ದೇಶೀಯ ಮಟ್ಟದಲ್ಲಿ ಕಬ್ಬಡ್ಡಿ ಕ್ರೀಡೆ ಮಾತ್ರ ಹೆಚ್ಚು ಪ್ರಚಲಿತವಾಗುತ್ತಿದೆ. ಇದೇ ರೀತಿಯ ಕ್ರೀಡಾ ಸಹಕಾರ ಎಲ್ಲಾ ರೀತಿಯ ಕ್ರೀಡೆಗಳಿಗೆ ಲಭಿಸಿದರೆ ಒಳಿತು. ಮುಂದಿನ ಪೀಳಿಗೆಗೂ ಕಬಡ್ಡಿ, ಖೋಖೋ ಮುಂತಾದ ಗ್ರಾಮೀಣ ಕ್ರೀಡೆಗಳು ಉಳಿಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಬಳಿಕ ಮಾತನಾಡಿದ ಗ್ರಾಮಸ್ಥ ಪರೀಕ್ಷಿತ್ ಜಾವಳಿ ಅವರು ಕ್ರೀಡೆಗಳು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ವೃದ್ದಿಗೆ ಸಹಕಾರಿಯಾಗಿವೆ. ಕಬಡ್ಡಿ ಪಂದ್ಯವು ಎದುರಾಳಿಯನ್ನು ಪಂದ್ಯದ ಮೂಲಕ ರೈಡ್ ಮಾಡಿ ಸೋಲಿಸುವ ಮೂಲಕ ಸಾಧನೆ ಗೈಯುವ ಆಟವಾಗಿದ್ದು, ಯುವಜನತೆ ಇಂತಹ ಕ್ರೀಡೆಯನ್ನು ಪ್ರೋತ್ಸಾಹಿಸಿ ಆಡುವ ಅಗತ್ಯವಿದೆ. ಇಂದಿನ ಯುವ ಪೀಳಿಗೆ ಮೊಬೈಲ್ ಕೈನಲ್ಲಿ ಇಟ್ಟುಕೊಂಡು ಕಾಲ ಕಳೆಯುತ್ತಿದ್ದಾರೆ. ಆದರೆ ಇದುಎಲ್ಲಾ ದೃಷ್ಟಿಯಿಂದ ಅಪಾಯಕಾರಿ.ಯುವಕರು ಇಂಥಹ ಚಟುವಟಿಕೆಗಳಿಂದ ದೂರ ಬಂದು ದೈಹಿಕವಾಗಿ ಸದೃಢಗೊಳಿಸುವ ಇಂಥಹ ಗ್ರಾಮೀಣ ಕ್ರೀಡೆಗಳತ್ತ ಮನಸ್ಸು ನೆಟ್ಟಬೇಕು. ಇದು ಕೌಟುಂಬಿಕವಾಗಿ ಹಾಗೂ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಉಪಯುಕ್ತ ಎಂದರು.
ಕಾರ್ಯಕ್ರಮದಲ್ಲಿ ಜಾವಳಿ ಗ್ರಾಮ ಪಂಚಾಯಿತಿ ಸದಸ್ಯ ರುಕ್ಮಯ್ಯ,ಶಿಕ್ಷಕ ಶಂಕರ್, ಅಮೆಚೂರು ಕಬಡ್ಡಿಯ ಸುರೇಶ್‍ಗೌಡ, ಪೌಲದಾಸ್, ಕೃಷ್ಣಪ್ಪ, ಗಿರೀಶ್, ಅಭಿ, ಅಶೋಕ್, ಸಂಜೀವ್ ಕೊಟ್ಯಾನ್ ಇದ್ದರು.