ಮೂಡಿಗೆರೆ : ದಾರದಹಳ್ಳಿ ಆದರ್ಶ ಗ್ರಾಮ ಯೋಜನೆ ಕಡೆಗಣನೆ : ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗ್ರಾಮಸ್ಥರ ಅಸಮಾಧಾನ.

490

ಮೂಡಿಗೆರೆ : 2015-16 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯ ಅಡಿಯಲ್ಲಿ ಆಯ್ಕೆಯಾಗಿದ್ದ ಆದರ್ಶ ಗ್ರಾಮ ಯೋಜನೆ ಜಾರಿಗೆ ಬಾರದೆ ಇರುವುದರ ಬಗ್ಗೆ ದಾರದಹಳ್ಳಿ ಗ್ರಾಮಸ್ಥರು ಸಂಸದೆ ಶೋಭಾ ಕರಂದ್ಲಾಜೆ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಲೆನಾಡಿನ ಸೆರಗಿನಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ದಾರದಹಳ್ಳಿ ಗ್ರಾಮವು 2015-16 ನೇ ಸಾಲಿನಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಆಯ್ಕೆಯಾಗಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಗ್ರಾಮವು ಆಯ್ಕೆಯಾಗಿದ್ದು, ಸಹಜವಾಗಿ ಸ್ಥಳೀಯರ ಸಂತಸಕ್ಕೆ ಕಾರಣವಾಗಿತ್ತು. ಆದರೆ ಯೋಜನೆಯು ಕಾರ್ಯರೂಪಕ್ಕೆ ಬಾರದೆ ನೆನೆಗುದಿಗೆ ಬಿದ್ದಿದರ ಪರಿಣಾಮ ಗ್ರಾಮಸ್ಥರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಯೋಜನೆಯ ಅನುಷ್ಠಾನದಲ್ಲಿನ ಬೇಜವಾಬ್ದಾರಿತನ ವಿದ್ಯುತ್, ಕುಡಿಯುವ ನೀರು, ಆಸ್ಪತ್ರೆ, ಚರಂಡಿ ವ್ಯವಸ್ಥೆ, ಉತ್ತಮ ರಸ್ತೆಗಳು ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ದಾರದಹಳ್ಳಿ ಗ್ರಾಮಸ್ಥರಿಗೆ ಆದರ್ಶ ಗ್ರಾಮದ ಯೋಜನೆ ಅಡಿಯಲ್ಲಿ ಹಲವು ಯೋಜನೆಗಳ ಉಪಯೋಗಗಳನ್ನು ಪಡೆದುಕೊಳ್ಳುವ ಆಸೆಗೆ ನೀರು ಎರಚಿದಂತೆ ಆಗಿದೆ.

ಇದರ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಕಿಸಾನ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬ್ರಿಜೇಶ್ ಕಡಿದಾಳ್ ಅವರು ಡಿ,ಕೆ.ತಾರಾದೇವಿ ಅವರು ಕೇಂದ್ರ ಸಚಿವರಾಗಿದ್ದಾಗ ದಾರದಹಳ್ಳಿಯಲ್ಲಿ 10 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಿಸಿದ್ದರು. ದಿನಕಳೆದಂತೆ ಇಲ್ಲಿನ ಆಸ್ಪತ್ರೆ ಶೋಚನೀಯ ಸ್ಥಿತಿ ತಲುಪಿದ್ದು, ಸೂಕ್ತ ನಿರ್ವಹಣೆಯ ಕೊರತೆಯಿಂದ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ಇಲ್ಲಿನ ಆಸ್ಪತ್ರೆಗೆ ಯಾವುದೇ ವೈದ್ಯಾಧಿಕಾರಿಗಳ ಹಾಗೂ ಸಿಬ್ಬಂದಿಗಳ ನೇಮಕ ಆಗಿಲ್ಲ. ಆಸ್ಪತ್ರೆ ಸಿಬ್ಬಂದಿಗಳಿಗೆ ನಿರ್ಮಾಣ ಮಾಡಿರುವ ವಸತಿಗೃಹಗಳು ಕೂಡ ಸ್ಟೋರ್ ರೂಮುಗಳಾಗಿ ಪರಿವರ್ತನೆಯಾಗಿವೆ. ಹಲವು ಬಾರಿ ಇಲ್ಲಿನ ವಸತಿಗೃಹಗಳ ಮರುನವೀಕರಣ ಮಾಡುವ ಪ್ರಹಸನ ನಡೆದಿದ್ದು, ಹಲವು ಕಟ್ಟಡಗಳಿಗೆ ಮೇಲ್ಛಾವಣಿಯೇ ಇಲ್ಲದಂತಾಗಿದೆ. ಆದರೆ ಕಂಟ್ರಾಕ್ಟರ್ ಗಳು ಮಾತ್ರ ಬಿಲ್ ಪಾಸ್ ಮಾಡಿಕೊಂಡು ದುಡ್ಡು ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಇರುವುದರಿಂದ ಯಾವ ಸಿಬ್ಬಂದಿಗಳೂ ಕಾರ್ಯ ನಿರ್ವಹಿಸಲು ಬರುತ್ತಿಲ್ಲ. ಅಲ್ಲದೆ ಗ್ರಾಮಕ್ಕೆ ಅಗತ್ಯವಾಗಿ ಬೇಕಾಗಿರುವ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್, ಶಾಲೆಗಳು ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳು ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕಾಣಸಿಗುವ ಸಂಸದೆ ಶೋಭಾ ಕರಂದ್ಲಾಜೆ ಅವರು ತಮ್ಮ ಜವಾಬ್ದಾರಿ ಮರೆತು ಕಾಣೆಯಾಗಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ತಾಲ್ಲೂಕು ವಕ್ತಾರ ಎಂ.ಎಸ್.ಅನಂತ್ ಅವರು ಮಾತನಾಡುತ್ತ, ಮೋಟಮ್ಮ ಅವರು ಮಲೆನಾಡು ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾಗಿದ್ದಾಗ ದಾರದಹಳ್ಳಿಗೆ ಡಾಂಬಾರು ರಸ್ತೆ ಮಾಡಿಸಿದ್ದು ಬಿಟ್ಟರೆ ಇಲ್ಲಿಯವರೆಗೂ ಇಲ್ಲಿನ ರಸ್ತೆಗಳು ಡಾಂಬಾರು ಕಂಡಿಲ್ಲ. ವಾಹನಗಳು ತಿರುಗುವುದು ಇರಲಿ, ನಡೆದುಕೊಂಡು ತಿರುಗಾಡಲೂ ಕೂಡ ಕಷ್ಟಕರವಾಗಿದೆ. ದಾರದಹಳ್ಳಿಯಲ್ಲಿ ಹಲವು ಸರಕಾರಿ ಕಛೇರಿಗಳಿದ್ದು, ಬೆಳಿಗ್ಗೆ ಹಾಗೂ ಸಂಜೆ ವೇಳೆ ಉತ್ತಮ ಬಸ್ ಸೌಕರ್ಯ ಇಲ್ಲದಿರುವ ಕಾರಣ ಸಿಬ್ಬಂದಿಗಳು ಖಾಸಗಿ ವಾಹನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿದೆ. ಇನ್ನು ಪಟ್ಟಣ ಪ್ರದೇಶಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳ ಪಾಡು ದೇವರಿಗೇ ಪ್ರೀತಿ. ಇನ್ನು ದಾರದಹಳ್ಳಿ ಗ್ರಾಮ ಪಂಚಾಯತಿ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದು, ದಾರದಹಳ್ಳಿ ಪ್ರೌಢಶಾಲೆ ಕೂಡಾ ಬಿರುಕು ಬಿಟ್ಟಿದ್ದು, ಮಕ್ಕಳು ಹಾಗೂ ಸಿಬ್ಬಂದಿಗಳು ಆತಂಕದಿಂದ ಕೆಲಸ ಮಾಡುವಂತಾಗಿದೆ ಎಂದರು.

ನಂತರ ಮಾತನಾಡಿದ ಕಾಂಗ್ರೆಸ್ ಎಸ್.ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನಯನಾ ಮೋಟಮ್ಮ ಅವರು ಚುನಾವಣೆಯ ಸಂದರ್ಭದಲ್ಲಿ ದಾರದಹಳ್ಳಿ ಗ್ರಾಮವನ್ನು ಡಿಜಿಟಲ್ ಗ್ರಾಮ ಮಾಡುವುದಾಗಿ ಸಂಸದರು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಡಿಜಿಟಲ್ ಗ್ರಾಮ ಮಾಡುವುದು ಇರಲಿ ಇರುವ ಒಂದು ದೂರವಾಣಿ ಕೇಂದ್ರವನ್ನೇ ಸರಿಯಾಗಿ ನಿಭಾಯಿಸದೆ ಬಾಗಿಲು ಮುಚ್ಚಿಸಿದ್ದಾರೆ. ಹಾಗೂ ಯಾವುದೇ ಮೊಬೈಲ್ ನೆಟ್ ವರ್ಕ್ ಸರಿಯಾಗಿ ಕೆಲಸ ಮಾಡದೆ ಜನರು ಪರದಾಡುವಂತಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಯ ಲಭ್ಯತೆಯನ್ನು ಅರಿತು ಆಯ್ಕೆ ಮಾಡದೆ ರಾಷ್ಟ್ರಮಟ್ಟದ ನಾಯಕರನ್ನು ಮುಂದಿಟ್ಟುಕೊಂಡು ಆಯ್ಕೆ ಮಾಡಿದ್ದರ ಪರಿಣಾಮ ಸಂಸದರು ಕ್ಷೇತ್ರದಲ್ಲಿ ಕಾಣಸಿಗುತ್ತಿಲ್ಲ. ಮಾದ್ಯಮಗಳ ಮುಂದೆ ಮಾತ್ರ ಬೊಬ್ಬಿಡುವ ನಮ್ಮ ಸಂಸದರನ್ನು ಹುಡುಕಿ ಊರಿಗೆ ಕಳುಹಿಸಿಕೊಡಿ ಎಂದು ವ್ಯಂಗ್ಯವಾಡಿದರು.

ಚುನಾವಣೆಯ ಸಂದರ್ಭದಲ್ಲಿ ಮಾತ್ರ ಶೋಭಾ ಕರಂದ್ಲಾಜೆ ಅವರು ಕಾರ್ಯಕ್ಷೇತ್ರಕ್ಕೆ ಕಾಲಿಡುತ್ತಾರೆ, ನಂತರ ಅವರು ಕಾಣೆಯಾಗುತ್ತಾರೆ ಎಂಬ ಅಪಖ್ಯಾತಿಗೆ ಒಳಗಾಗಿದ್ದರು. ಕಳೆದ ಲೋಕಸಭೆ ಚುನಾವಣೆಯ ವೇಳೆ ಈ ವಿಚಾರದ ಬಗ್ಗೆ ಸ್ವಪಕ್ಷೀಯರೇ ಅಸಮಧಾನ ವ್ಯಕ್ತಪಡಿಸಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಅವರ ಹೆಸರು ಕೈ ಬಿಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. ನಂತರ ಬಿಜೆಪಿಯ ಹಿರಿಯ ನಾಯಕರುಗಳ ಭರವಸೆಯ ಮೇರೆಗೆ ಶೋಭಾ ಕಂರದ್ಲಾಜೆ ಅವರನ್ನು ಗೆಲ್ಲಿಸಿ ಕಳುಹಿಸುವಲ್ಲಿ ಕಾರ್ಯಕರ್ತರುಗಳು ಶ್ರಮವಹಿಸಿದ್ದರು. ಗೆದ್ದ ನಂತರ ಪುನಃ ತಮ್ಮ ಹಳೇ ಚಾಳಿಯನ್ನು ಮುಂದುವರೆಸಿರುವ ಸಂಸದರ ನಡವಳಿಕೆ ಎಲ್ಲರನ್ನೂ ಮುಜುಗರಕ್ಕೆ ಈಡುಮಾಡಿರುವುದಂತೂ ಸತ್ಯ.