ಮೂಡಿಗೆರೆ : ಪರಿಸರ ಉಳಿಯಬೇಕೆಂದರೆ ಮರಗಳ ರಕ್ಷಣೆ ಮಾಡಬೇಕು : ರತ್ನಮ್ಮ.

257
firstsuddi

ಮೂಡಿಗೆರೆ : ಪರಿಸರ ಉಳಿಯಬೇಕೆಂದರೆ ಮರಗಳ ರಕ್ಷಣೆ ಮಾಡಬೇಕು. ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ತೋಟದಲ್ಲಿ ಒಂದೊಂದು ಗಿಡ ನೆಟ್ಟು ಪೋಷಣೆ ಮಾಡುವ ಮೂಲಕ ನಮ್ಮನ್ನು ಸಾಕಿ ಸಲುಹುತ್ತಿರುವ ಪರಿಸರವನ್ನು ಉಳಿಸಬೇಕೆಂದು ಪಲ್ಗುಣಿ ಗ್ರಾ.ಪಂ. ಅಧ್ಯಕ್ಷೆ ರತ್ನಮ್ಮ ರಮೇಶ್ ಹೇಳಿದರು.
ತಾಲೂಕಿನ ಸಬ್ಬೇನಹಳ್ಳಿಯಲ್ಲಿರುವ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಬೆಳೆದಿರುವ ವಿವಿಧ ಜಾತಿಯ ಗಿಡಗಳನ್ನು ರೈತರು ಹಾಗೂ ಸಾರ್ವಜನಿಕರಿಗೆ ವಿತರಿಸಿ ಅವರು ಮಾತನಾಡಿದರು. ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿಯೇ ಅರಣ್ಯ ಇಲಾಖೆಯ ನರ್ಸರಿ ಇರುವುದರಿಂದ ನಮ್ಮ ಗ್ರಾ.ಪಂ. ವ್ಯಾಪ್ತಿಯ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಉತ್ತಮ ದರ್ಜೆಯಲ್ಲಿ ಗಿಡಗಳನ್ನು ಬೆಳೆಸಲಾಗಿದೆ. ಹೆಚ್ಚು ರೋಗನಿರೋಧಕತೆ ಹೊಂದಿರುವ ಇಲ್ಲಿನ ಗಿಡಗಳನ್ನು ರೈತರು ಹಾಗೂ ಸಾರ್ವಜನಿಕರು ಖರೀದಿಸಿ, ಅವರ ತೋಟ ಹಾಗೂ ಮನೆಯ ಮುಂದೆ ನೆಟ್ಟು ಉತ್ತಮವಾಗಿ ಪೋಷಣೆರ ಮಾಡಿ ಪರಿಸರವನ್ನು ಉಳಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಅರಣ್ಯ ವಲಯ ಅರಣ್ಯಾಧಿಕಾರಿ ಎಂ.ಇ.ಚರಣ್‍ಕುಮಾರ್ ಮಾತನಾಡಿ, ಸುಮಾರು 6 ಎಕರೆ ಅರಣ್ಯ ಪ್ರದೇಶದಲ್ಲಿ 4 ಎಕರೆ ಜಾಗದಲ್ಲಿ ಸಿಲ್ವರ್, ಸಂಪಿಗೆ, ಮಹಾಗನಿ, ನೇರಳೆ, ಹೆಬೇವು, ಶಿವನೆ ಜಾತಿಯ ಒಟ್ಟು 1.10 ಲಕ್ಷ ಸಸಿಗಳನ್ನು ಬೆಳೆಯಲಾಗಿದೆ. ಹೆಚ್ಚು ರೋಗನಿರೋಧಕತೆ ಹೊಂದುವಂತೆ ಗಿಡಗಳ ತಯಾರಿ ಕಾರ್ಯದಲ್ಲಿ ಗಮನ ಹರಿಸಲಾಗಿದೆ. ಗಿಡಗಳ ವಿತರಣೆ ಸೋಮವಾರದಿಂದ ಪ್ರಾರಂಭಿಸಿದ್ದು, ಅಗತ್ಯವಿರುವ ಗಿಡಗಳನ್ನು ಪಡೆಯಲು ರೈತರು ಹಾಗೂ ಸಾರ್ವಜನಿಕರು ಇಲ್ಲಿಗೆ ಆಗಮಿಸಿ ಕೆಲ ಗಿಡಗಳಿಗೆ 1ರೂ, ಕೆಲವು ಗಿಡಗಳಿಗೆ 3 ರೂ ನೀಡಿ ಖರೀದಿಸಬಹುದೆಂದು ಮಾಹಿತಿ ನೀಡಿದರು.
ಈ ವೇಳೆ ಪಲ್ಗುಣಿ ಗ್ರಾ.ಪಂ. ಸದಸ್ಯ ಪಿ.ಕೆ.ಮಂಜುನಾಥ್, ಡಿಆರ್‍ಎಫ್ ಆನಂದ್, ಸಿಬ್ಬಂದಿ ಕೆ.ಆನಂದ್, ಕೆ.ಎಸ್.ಮಂಜುನಾಥ್, ಶಂಕರ್ ಉಪಸ್ಥಿತರಿದ್ದರು.