ಕೊಟ್ಟಿಗೆಹಾರ : ಬಲ್ಲಾಳರಾಯನ ದುರ್ಗಕ್ಕೆ ಶನಿವಾರ ಚಾರಣಕ್ಕೆ ಬಂದು ದಾರಿ ತಪ್ಪಿ ಕಗ್ಗಾಡಿನಲ್ಲಿ ಸಿಲುಕಿಕೊಂಡಿದ್ದ ಮೂಡಿಗೆರೆಯ ಸುಶಾಂತ್ ನಗರದ ಚಾರಣಿಗರು ಪತ್ತೆಯಾಗಿದ್ದಾರೆ.
ಶನಿವಾರ ಮದ್ಯಾಹ್ನ ದುರ್ಗದಹಳ್ಳಿ ಸಮೀಪದ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಬಲ್ಲಾಳರಾಯನದುರ್ಗ, ರಾಣಿಝರಿಗೆ ಚಾರಣಕ್ಕೆ ಬಂದಿದ್ದ ಮೂಡಿಗೆರೆ ಮೂಲದ ಪ್ರಜ್ವಲ್, ಸ್ವರೂಪ್, ಪ್ರಜ್ವಲ್, ವಿವೇಕ್ ಎಂಬುವವರು ಬಲ್ಲಾಳರಾಯನ ದುರ್ಗದ ಅರಣ್ಯದಲ್ಲಿ ಸಾಗಿದ್ದು ಶನಿವಾರ ಸಂಜೆಯ ವೇಳೆಗೆ ಹಿಂದಿರುಗಿ ಬರಲು ದಾರಿ ತಿಳಿಯದೆ ಅರಣ್ಯದಲ್ಲೆ ಸಿಲುಕಿದ್ದರು.
ದಾರಿ ತಪ್ಪಿದ ಪ್ರವಾಸಿಗರು ಅರಣ್ಯದಲ್ಲಿ ನೆಟ್‍ವರ್ಕ್ ಸಿಗುವ ಕೆಲ ಕಡೆಗಳಲ್ಲಿ ನಿಂತು ಸ್ಥಳೀಯರಿಗೆ ಕರೆ ಮಾಡಿದ್ದು ಸ್ಥಳೀಯರು ಶನಿವಾರ ರಾತ್ರಿ ಬಲ್ಲಾಳರಾಯನ ದುರ್ಗಕ್ಕೆ ತೆರಳಿ ತಪ್ಪಿಸಿಕೊಂಡ ಪ್ರವಾಸಿಗರ ಹುಡುಕಾಟದಲ್ಲಿ ತೊಡಗಿದ್ದರು. ಸ್ಥಳಿಯರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿ ಹುಡುಕಾಟದಲ್ಲಿ ತೊಡಗಿದ್ದು ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಚಾರಣಿಗರನ್ನು ಪತ್ತೆ ಹಚ್ಚಿದ್ದಾರೆ.
ದಟ್ಟ ಅರಣ್ಯದ ನಡುವೆ ಇರುವ ಬಲ್ಲಾಳರಾಯನ ದುರ್ಗ ಕೋಟೆ ಕೆಳಭಾಗದಲ್ಲಿ ಅರಣ್ಯದಲ್ಲಿರುವ ಶಿವನ ಬಾಗಿಲು ಎಂಬಲ್ಲಿ ಚಾರಣಿಗರು ದಾರಿ ತಪ್ಪಿದ್ದು ಹಿಂದಿರುಗಿ ಬಾರಲು ದಾರಿ ತಿಳಿಯದೆ ಪರದಾಡಿದ್ದಾರೆ. ಆ ವೇಳೆ ಕತ್ತಲಾವರಿಸಿದ್ದು ನೆಟ್‍ವರ್ಕ್ ಸಿಗುವ ಎತ್ತರದ ಪ್ರದೇಶದಲ್ಲಿ ನಿಂತು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಚಾರಣಿಗರು ಕರೆ ಮಾಡಿ ತಿಳಿಸಿದ್ದ ಜಾಗದ ಜಾಡು ಹಿಡಿದು ಕಾಡು ಹಾದಿಯಲ್ಲಿ ಕೂಗುತ್ತಾ ಸಾಗಿದ್ದು ಒಂದೆಡೆ ಚಾರಣಿಗೆ ಕೂಗಿಗೆ ಪ್ರತಿಕ್ರಿಯಿಸಿದ್ದಾರೆ. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಸುಂಕಸಾಲೆಗೆ ಕರೆ ತಂದು ಅಲ್ಲಿಂದ ಅವರ ಮನೆಗಳಿಗೆ ಕಳುಹಿಸಿಕೊಡಲಾಯಿತು.
ಕಾರ್ಯಚರಣೆಯಲ್ಲಿ ಮೂಡಿಗೆರೆ ವೃತ್ತ ನಿರೀಕ್ಷಕ ಜಗನ್ನಾಥ್, ಬಾಳೂರು ಪಿಎಸ್‍ಐ ಮೂರ್ತಿ ,ಪೋಲಿಸ್ ಸಿಬ್ಬಂದಿ ಹೇಮಂತ್, ಓಂಕಾರ್, ಸತೀಶ್, ಉಪವಲಯಾರಣ್ಯಧಿಕಾರಿ ಯಾಸಿನ್, ಅರಣ್ಯ ರಕ್ಷಕ ನವೀನ್, ಸ್ಥಳೀಯರಾದ ಪೌಲ್‍ದಾಸ್, ಸತೀಶ್, ಗಣೇಶ್, ನಿಖಿಲ್, ಜಯರಾಜ್, ಅನಿಲ್, ಮನೋಜ್ ಇದ್ದರು.










