ಮೂಡಿಗೆರೆ : ಬಿದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇನ್ನೂ ಹೆಚ್ಚಿನ ಅನುದಾನ ನೀಡಲು ಸಿದ್ಧ : ಶಾಸಕ ಎಂ.ಪಿ.ಕುಮಾರಸ್ವಾಮಿ.

919
firstsuddi

ಮೂಡಿಗೆರೆ : ಬಿದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇನ್ನೂ ಹೆಚ್ಚಿನ ಅನುದಾನ ನೀಡಲು ಸಿದ್ಧವಿರುವುದಾಗಿ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಹೇಳಿದರು.
ಬಿದರಹಳ್ಳಿಯ ಸರಕಾರಿ ಶಾಲೆಯ ಪುನರ್ ನವೀಕರಣದ ಕಟ್ಟದ ಉದ್ಘಾಟನೆ ಮಾಡಿದ ಬಳಿಕ ಅವರು ಮಾತನಾಡಿದರು. ಇಲ್ಲಿನ ಸರರ್ಕಾರಿ ಶಾಲೆಯು ಇತರೆ ಶಾಲೆಗಳಿಗೆ ಮಾದರಿಯಾಗಿದ್ದು, ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಶಾಲೆಯ ಕಟ್ಟಡಕ್ಕೆ ಹಾನಿಯಾಗಿತ್ತು. ಇದರ ಪುನರ್ ನವೀಕರಣ ಕಾರ್ಯವು ಪೂರ್ಣಗೊಂಡಿರುವುದು ಶಾಲೆಯ ಮಕ್ಕಳಿಗೆ ಅನುಕೂಲವಾಗಲಿದೆ. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಶಾಲೆಗೆ ಇನ್ನೂ 3 ಕೊಠಡಿಗಳ ಅವಶ್ಯಕತೆಯಿದೆ. ಸುಮಾರು 10 ಲಕ್ಷ ಖರ್ಚು ತಗುಲಲಿದೆ ಎಂದು ಹೇಳಿದ್ದಾರೆ. ಇಷ್ಟು ಮೊತ್ತವನ್ನು ನೀಡಲು ಸಾಧ್ಯವಾಗದೆ ಇದ್ದರೂ ಕೂಡ ಹೆಚ್ಚಿನ ಮೊತ್ತವನ್ನು ಶಾಸಕರ ನಿಧಿಯಿಂದ ನೀಡಲಿರುವುದಾಗಿ ಒಪ್ಪಿಕೊಂಡಿದ್ದೇನೆ. ಇಲ್ಲಿನ ಶಾಲೆಯು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇದ್ದು, ಮೂಡಿಗೆರೆ ಪಟ್ಟಣದಿಂದ ಕೇವಲ 3ಕಿ.ಮೀ ದೂರ ಇದ್ದರೂ ಇಲ್ಲಿನ ಶಿಕ್ಷಕರನ್ನು ನಂಬಿ ಬಡವರು ಸಿರಿವಂತರು ಎನ್ನದೆ ಇಲ್ಲಿಯೇ ಶಿಕ್ಷಣ ಕೊಡಿಸುತ್ತಿರುವುದು ಈ ಶಾಲೆಯ ಮಹತ್ವವನ್ನು ಸಾರಿ ಹೇಳುತ್ತದೆ. ಇಂಥಹ ಉತ್ತಮ ಶಿಕ್ಷಣ ನೀಡುತ್ತಿರುವ ಈ ಶಾಲೆಯ ಜೊತೆಗೆ ಪ್ರೌಢ ಶಾಲೆ ಮತ್ತು ಪಿಯುಸಿ ಕಾಲೇಜುಗಳನ್ನು ನಿರ್ಮಾಣ ಮಾಡುವಂತೆ ಒತ್ತಡ ಹೇರುವುದಾಗಿ ಭರವಸೆ ನೀಡಿದರು.
ಬಳಿಕ ಮಾತನಾಡಿದ ಬಿದರಹಳ್ಳಿ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಬಿದರಹಳ್ಳಿ ಜಯಪಾಲ್ ಅವರು, 1942ರಲ್ಲಿ ಇಲ್ಲಿನ ಶಾಲೆ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೆ ಸಾವಿರಾರು ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಉತ್ತಮ ಜೀವನ ನಿರ್ಮಿಸಿಕೊಂಡಿದ್ದಾರೆ. ಅದರಲ್ಲೂ ಡಾಕ್ಟರ್, ಇಂಜಿನಿಯರ್ ಹಾಗೂ ದೊಡ್ಡ ದೊಡ ್ಡ ಕಂಪೆನಿಗಳಲ್ಲಿ ದೇಶ-ವಿದೇಶದಲ್ಲಿ ಉನ್ನತ ಪದವಿಗಳನ್ನು ಅಲಂಕರಿಸಿ ಈ ಶಾಲೆಯ ಹೆಸರನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಶಾಲೆಗೆ ಇನ್ನಷ್ಟು ಅನುಕೂಲತೆ ದೊರೆತಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಸಾಧ್ಯವಾಗುತ್ತದೆ. ಶಾಲೆಗೆ ಇನ್ನೂ 3 ಕೊಠಡಿಗಳ ಅವಶ್ಯಕತೆ ಇದ್ದು ಶಾಸಕರು ಅದನ್ನು ಈಡೇರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಶಾಲೆಯ ಮಕ್ಕಳಿಗೆ ಅನುಕೂಲವಾಗಲು ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟಿಸಲಾಯಿತು. ತೆಂಗಿನ ಸಸಿ ನೆಡುವ ಮೂಲಕ ಮಕ್ಕಳಿಗೆ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಬಿದರಹಳ್ಳಿ ಜಯಪಾಲ್, ಹಳೇಕೋಟೆ ಮನು, ಬೆಳೆಗಾರರ ಸಂಘದ ಮುಖಂಡ ಬಿದರಹಳ್ಳಿ ಜಯರಾಂ,  ತಾ.ಪಂ ಸದಸ್ಯ ಭಾರತಿರವೀಂದ್ರ, ಜಿ.ಪಂ.ಸದಸ್ಯೆ ಸುಧಾಯೋಗೇಶ್, ಜೆಡಿಎಸ್‍ಯುವ ಮುಖಂಡ ಬಿದರಹಳ್ಳಿ ಲೋಹಿತ್, ಸಮಾಜ ಸೇವಕ ತರುವೆ ಆದರ್ಶ್, ಶಾಲೆಯ ಎಸ್.ಡಿ.ಎಂಸಿ ಸದಸ್ಯರು, ಸ್ಥಳೀಯರು ಭಾಗವಹಿಸಿದ್ದರು.