ಮೂಡಿಗೆರೆ : ಮಕ್ಕಳ ಮನ ವಿಕಸನಕ್ಕೆ ವನಬೆಳಕು ಶಿಬಿರ ಸಹಕಾರಿಯಾಗಲಿದೆ : ದಿನೇಶ್ ಹೊಳ್ಳ.

183
First Suddi

ಕೊಟ್ಟಿಗೆಹಾರ : ಮಕ್ಕಳ ಮನ ವಿಕಸನಕ್ಕೆ ವನಬೆಳಕು ಶಿಬಿರ ಸಹಕಾರಿಯಾಗಲಿದೆ ಎಂದು ಅಂತರಾಷ್ಟ್ರೀಯ ಚಿತ್ರ ಕಲಾವಿದ ಹಾಗೂ ಪರಿಸರಪ್ರೇಮಿಗಳಾದ ದಿನೇಶ್ ಹೊಳ್ಳ ಹೇಳಿದರು.
ಸಹ್ಯಾದ್ರಿ ಸಂಚಯ ಸಂಸ್ಥೆಯ ವತಿಯಿಂದ ಬಾಳೂರಿನಲ್ಲಿ ನಡೆದ ವನಬೆಳಕು ಅಡವಿ ಮಕ್ಕಳ ಸೃಜನ ವಿಕಸನ ಶಿಬಿರದಲ್ಲಿ ಅವರು ಮಾತನಾಡಿದರು.
ವನಬೆಳಕು ಶಿಬಿರ ಬೆಳ್ತಂಗಡಿಯ ಮಕ್ಕಿಪರ್ಲ ಕಾಡಿನ ಹಳ್ಳಿಯಿಂದ ಆರಂಭವಾಗಿದ್ದು ಕಜಕೆ, ಶಿಶಿಲ, ಬಾಳೂರು, ಮಲೆಮನೆ, ಜಾವಳಿ ಮುಂತಾದ ಕಡೆ ಮುಂದಿನ ದಿನಗಳಲ್ಲಿ ಶಿಬಿರ ನಡೆಯಲಿದೆ. ಕೊರೊನಾ, ಲಾಕ್‍ಡೌನ್ ದಿನಗಳಲ್ಲಿ ನಗರದ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಲಭಿಸುತ್ತಿದ್ದರೂ ಅಡವಿ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣದ ಸವಲತ್ತುಗಳು ಸಿಗದೇ ಇರುವ ಕಾರಣ ಆ ಮಕ್ಕಳಿಗೆ ಚಟುವಟಿಕೆಯಿಂದಿರಸಲು ವನಬೆಳಕು ಶಿಬಿರವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಪಣಂಬೂರ್ ವಾಸುದೇವ್ ಐತಾಳ್ ಅವರು ಶಿಬಿರದ ಪ್ರಾಯೋಜಕರಾಗಿದ್ದು ಕಾಡಿನ ಮಕ್ಕಳು ಶಿಕ್ಷಣ ವಂಚಿತರಾಗದೇ ಕಲಿಯಬೇಕು. ಮುಂದೆ ಆ ಮಕ್ಕಳು ಅರಣ್ಯ ಇಲಾಖೆ ಅಥವಾ ಇನ್ಯಾವುದೇ ಹುದ್ದೆಯಲ್ಲಿ ತೊಡಗಿಸಿ ಕೊಳ್ಳಬೇಕು. ಆಗ ಪಶ್ಚಿಮ ಘಟ್ಟ ಕಾಡು, ವನ್ಯಜೀವಿಗಳ ಪರಿಸರ ಸಂರಕ್ಷಣೆ ಬಲವಾಗಬಹುದು ಎಂಬುದು ಶಿಬಿರದ ಹಿಂದಿನ ಮೂಲ ಉದ್ದೇಶವಾಗಿದೆ ಎಂದರು.
ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ ಮಕ್ಕಳು ಪ್ರಕೃತಿಯ ಸಾನಿಧ್ಯದಲ್ಲಿ ಬೆಳೆಯಬೇಕು. ಪರಿಸರ ಸಂರಕ್ಷಣೆಯ ಮಹತ್ವ ಮಕ್ಕಳಿಗೆ ಬಾಲ್ಯದಲ್ಲೆ ಅರಿವಾಗಬೇಕು. ಕಾಡಿನ ಮಕ್ಕಳಿಗಾಗಿ ಆಯೋಜಿಸಿರುವ ವನ ಬೆಳಕು ಕಾರ್ಯಕ್ರಮ ಸೃಜನಶೀಲ ಚಟುವಟಿಕೆಗಳಿಂದ ಮಕ್ಕಳ ಮನೋವಿಕಸಕ್ಕೆ ಪೂರಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಲಾವಿದರಾದ ಸ್ವಪ್ನಾ ನರೋನ, ಉಪನ್ಯಾಸಕ ಪ್ರಸಾದ್ ಶೆಣೈ ಆರ್.ಕೆ, ಸಂಶೋದಕರಾದ ಮಮತಾ, ಸಚಿನ್, ಭಿಡೆ, ದೀಪಿಕಾ, ನಾಗರಾಜ್ ಕೂವೆ, ಬಾಳೂರು ಸಹಿಪ್ರಾ ಶಾಲೆ ಮುಖ್ಯಶಿಕ್ಷಕ ವೆಂಕಟೇಶ್, ಎಸ್‍ಡಿಎಂಸಿ ಅಧ್ಯಕ್ಷ ನಟೇಶ್ ಮುಂತಾದವರು ಇದ್ದರು.