ಮೂಡಿಗೆರೆ : ಸರ್ಕಾರಿ ಶಾಲೆ ಉಳಿಸಲು ಪೋಷಕರು ಸಹಕರಿಸಿ : ರವಿಕಲಾ ಪೈ.

122
firstsuddi

ಕೊಟ್ಟಿಗೆಹಾರ : ಸರ್ಕಾರಿ ಶಾಲೆಗೆ ಪೋಷಕರು ಮಕ್ಕಳನ್ನು ಹೆಚ್ಚಾಗಿ ಸೇರಿಸುವ ಮೂಲಕ ಶಾಲೆ ಉಳಿಸಬೇಕು ಎಂದು ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರವಿಕಲಾ ಪೈ ಹೇಳಿದರು.

ಕೊಟ್ಟಿಗೆಹಾರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿವಿಧ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ನಡೆದ ಪೋಷಕರ ಚಿಂತನಾ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಸರ್ಕಾರಿ ಶಾಲೆ ಉಳಿಸುವುದು ಪ್ರತಿಯೊಬ್ಬ ಪೋಷಕಕರ ಕರ್ತವ್ಯವಾಗಿದೆ. ಗ್ರಾಮ ಪಂಚಾಯಿತಿಯ ನರೇಗಾ ಅನುದಾನದಲ್ಲಿ ಶಾಲಾ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಶಿಕ್ಷಣ ಇಲಾಖೆಯ ಹಿರಿಯ ಉಪನ್ಯಾಸಕ ಉಮೇಶ್ ಮಾತನಾಡಿ ‘ಶಾಲಾ ಶಿಕ್ಷಕರು ಧಾನಿಗಳ ಸಹಕಾರ ಪಡೆದು ಶಾಲೆಗೆ ಬೇಕಾಗುವ ಕಂಪ್ಯೂಟರ್ ವ್ಯವಸ್ಥೆಯಿಂದ ಹಿಡಿದು ಪ್ರತಿಯೊಂದು ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಗ್ರಾಮೀಣ ಭಾಗದ ಶಾಲೆ ಉಳಿಯಬೇಕಾದರೆ ಶಾಲಾ ಸಮಿತಿ, ಪೋಷಕರು, ಶಿಕ್ಷಕ ವೃಂದದ ಸಹಕಾರದಿಂದ ಮಾತ್ರ ಸಾಧ್ಯವಾಗುತ್ತದೆ. ಈ ಶಾಲೆ ಕೆಪಿಎಸ್ ಆಗಬೇಕಾದರೆ ಮಕ್ಕಳ ಸಂಖ್ಯೆ ಹೆಚ್ಚಾಗಲು ಪೋಷಕರ ಪಾತ್ರ ಅಪಾರವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಸಂಜಯ್‍ಗೌಡ ಮಾತನಾಡಿ ‘ಮಕ್ಕಳ ಮೂಲಭೂತ ಸೌಲಭ್ಯದ ಬಗ್ಗೆ ಯಾವುದೇ ಕೊರತೆಯಿಲ್ಲ. ಎಸ್‍ಎಸ್‍ಎಲ್‍ಸಿ ಫಲಿತಾಂಶ ಕೂಡ ಉತ್ತಮವಾಗಿದೆ. ಪೋಷಕರು ಶಾಲೆಯ ಜತೆ ಸಂಪರ್ಕ ಇಟ್ಟುಕೊಂಡು ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಬಗ್ಗೆ ವಿಚಾರ ವಿನಿಮಯ ಮಾಡುವುದು ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಎ.ಎಸ್.ಲಲಿತ, ಮುಖಂಡ ಟಿ.ಎಂ.ಗಜೇಂದ್ರ, ಬಿ.ಎಂ.ಸತೀಶ್, ಮುಖ್ಯ ಶಿಕ್ಷಕಿ ಪ್ರಭಾ, ಶಿಕ್ಷಕ ಕಿರಣ್ ಕುಮಾರ್, ಯೋಗೀಶ್, ಪ್ರಾಥಮಿಕ ಶಾಲಾ ಸಮಿತಿಯ ಅಧ್ಯಕ್ಷ ಮಹೇಶ್, ಮಾಜಿ ಅಧ್ಯಕ್ಷ ಕಾಂತರಾಜು, ರಮೇಶ್ ಹಾಗೂ ಪೋಷಕರು ಇದ್ದರು.