ಮೂಡಿಗೆರೆ: ಜುಲೈ 5ರ ಭಾನುವಾರದಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಲಾಕ್‍ಡೌನ್ ನಡುವೆಯೂ ಮುಡಿಗೆರೆ ಸುತ್ತಮುತ್ತಲು ಕೈಗೊಂಡ ಪ್ರವಾಸ ಕೈಗೊಂಡ ವಿಚಾರದಲ್ಲಿ ಜಿಲ್ಲೆಯಾದ್ಯಂತ ಆಕ್ರೋಷ ವ್ಯಕ್ತವಾಗಿತ್ತು. ಇದರ ಜೊತೆಗೆ ಉಸ್ತವಾರಿ ಸಚಿವರಿಗೆ ಕೋರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಚಿವರು ಪ್ರವಾಸ ಕೈಗೊಂಡ ಸ್ಥಳಗಳಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ದುರ್ಗದಹಳ್ಳಿ, ಜಾವಳಿ ಗ್ರಾಮದ ಕೆಲವರಿಗೆ ಹೋಂ ಕ್ವಾರಂಟೈನ್ ಮಾಡಿರುವದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೇವಲ ಹೋಂ ಕ್ವಾರಂಟೈನ್ ಆಗಿದ್ದಿದ್ದರೆ ಈ ವಿಚಾರ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರಲಿಲ್ಲ. ಆದರೆ ಕಾರ್ಯಕ್ರಮದಲ್ಲಿ ಸಚಿವರ ಜೊತೆಯಲ್ಲಿಯೇ ಪ್ರವಾಸ ಕೈಗೊಂಡ ಉಪ ವಿಭಾಗಾಧಿಕಾರಿಗಳು ಹಾಗೂ ಇನ್ನಿತರೆ ಹಲವು ಅಧಿಕಾರಿಗಳನ್ನು ಹೋಂಕ್ವಾರಂಟೈನ್ ಮಾಡದೆ ದೂರದಿಂದಲೇ ಅಂತರ ಕಾಯ್ದುಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಥಳೀಯ ಗ್ರಾಮಸ್ಥರನ್ನು ಹೋಂ ಕ್ವಾರಂಟೈನ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿದ ಸ್ಥಳೀಯ ಹೆಚ್.ಸಂತೋಷ್ ಅವರು, ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಭೀಕರ ಅತೀವೃಷ್ಟಿಯಿಂದಾಗಿ ಮೂಡಿಗೆರೆಯ ಹಲವು ಗ್ರಾಮಗಳ ಸ್ಥಳೀಯರು ತೋಂದರೆಗೆ ಒಳಗಾಗಿದ್ದರು. ಇದು ಪ್ರಕೃತಿ ಸಹಜವಾದ ಪ್ರಕ್ರಿಯೆ ಎಂದು ಎಲ್ಲರೂ ಸುಮ್ಮನಾಗಿದ್ದರು. ಆದರೆ ಈ ವರ್ಷದ ಜುಲೈ ತಿಂಗಳಿನಲ್ಲಿ ಸಚಿವರು, ಶಾಸಕರು, ಅಧಿಕಾರಿಗಳ ಆಗಮನದಿಂದಾಗಿ ಮಾನವ ನಿರ್ಮಿತ ತೊಂದರೆಗಳಿಗೆ ಒಳಗಾಗಿದ್ದೇವೆ. ಕೇವಲ ಇಷ್ಟೇ ಆಗಿದ್ದರೆ ಯಾರಿಗೂ ಬೇಸರವಾಗುತ್ತಿರಲಿಲ್ಲ, ಪ್ರವಾಸದಲ್ಲಿ ದೇವರಮನೆಯಲ್ಲಿ ಕೇಶ ಮುಂಡನ ಮಾಡಿಸಿಕೊಂಡ ಉಪ ವಿಭಾಗಾಧಿಕಾರಿ ನಾಗರಾಜ್ ಅವರು ಹೋಂಕ್ವಾರಂಟೈನ್‍ಗೆ ಒಳಗಾಗದೆ ತಮ್ಮ ಕಛೇರಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಇದಿಷ್ಟೇ ಅಲ್ಲದೆ ಪ್ರವಾಸದಲ್ಲಿ ಸಚಿವರ ಪಕ್ಕದಲ್ಲಿಯೇ ನಿಂತು ಮಾಹಿತಿ ನೀಡುತ್ತಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮರಾಜ್ ಅವರು ಹೋಂ ಕ್ವಾರಂಟೈನ್‍ಗೆ ಒಳಗಾಗದೆ ತಾವೇ ಖುದ್ದಾಗಿ ದುರ್ಗದ ಹಳ್ಳಿ ಗ್ರಾಮಸ್ಥರ ಮನೆಗಳಿಗೆ ಹೋಂ ಕ್ವಾರಂಟೈನ್ ಚೀಟಿ ಅಂಟಿಸಿ ಬರುತ್ತಿರುವುದು ಸ್ಥಳೀಯರ ಮನಸ್ಸಿಗೆ ನೋವುಂಟು ಮಾಡುತ್ತಿದೆ. ಇದೇ ರೀತಿ ಪ್ರವಾಸದಲ್ಲಿ ಪಾಲ್ಗೊಂಡ ಅನೇಕ ಅಧಿಕಾರಿಗಳನ್ನು ಜಿಲ್ಲಾಡಳಿತ ಹೋಂಕ್ವಾರಂಟೈನ್ ಮಾಡದೆ ಅರಾಮವಾಗಿ ತಿರುಗಾಡಲು ಬಿಟ್ಟಿದ್ದು ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಒಟ್ಟಾರೆ ತಾಲ್ಲೂಕಿನಲ್ಲಿ ಜಿಲ್ಲಾ ಸಚಿವರ ಪ್ರವಾಸ ತೀವ್ರ ತಲೆನೋವಾಗಿ ಪರಿಣಮಿಸಿದ್ದು, ಹೋಂ ಕ್ವಾರಂಟೈನ್ ವಿಚಾರದಲ್ಲಿ ಜಿಲ್ಲಾಡಳಿತಕ್ಕೆ ಮುಜುಗರ ಉಂಟು ಮಾಡುತ್ತಿರುವುದಂತೂ ಸತ್ಯ. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಸರ್ಕಾರಿ ಅಧಿಕಾರಿಗಳಾದ ಮಾತ್ರಕ್ಕೆ ಕೋವಿಡ್-19 ಸೋಂಕು ಬರುವುದಿಲ್ಲವೇ ಎನ್ನುವ ವಿಷಯ ಬಹು ಚರ್ಚಿತ ವಿಷಯವಾಗಿ ಹೊರ ಹೊಮ್ಮಿದೆ.










