ಮೇಲ್ ಮರವತ್ತೂರು ಶ್ರೀ ಆದಿಪರಾಶಕ್ತಿ ದೇವಿಯ 19ನೇ ವಾರ್ಷಿಕ ಉತ್ಸವ: ನೂರಾರು ಭಕ್ತರ ನಡುವೆ ಆಚರಣೆ.

44

ಚಿಕ್ಕಮಗಳೂರು: ಮೇಲ್ ಮರವತ್ತೂರು ಶ್ರೀ ಆದಿಪರಾಶಕ್ತಿ ದೇವಿಯ 19ನೇ ವಾರ್ಷಿಕ ಉತ್ಸವ ಇಲ್ಲಿನ ಲಕ್ಷ್ಮೀಶ ನಗರದಲ್ಲಿ ನೂರಾರು ಭಕ್ತರ ನಡುವೆ ಮಂಗಳವಾರ ವೈಭವದಿಂದ ನಡೆಯಿತು. ಉತ್ಸವದ ಅಂಗವಾಗಿ ಶ್ರೀ ಆದಿಪರಾಶಕ್ತಿ ದೇವಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಮಾಲಾಧಾರಿಗಳಿಂದ ಸಾಮೂಹಿಕ ಭಜನೆ, ನಾಮ ಸಂಕೀರ್ತನೆ, ಸ್ತೋತ್ರ ಪಠಣ, ಕುಂಕುಮಾರ್ಚನೆ ಜರುಗಿತು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಶ್ರೀ ಆದಿಪರಾಶಕ್ತಿ ಭಕ್ತ ಮಂಡಳಿಯಿಂದ ಬಡವರಿಗೆ ವಸ್ತ್ರದಾನ ಮಾಡಲಾಯಿತು. ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು. ಉತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಮಾತನಾಡಿದ ಶ್ರೀ ಆದಿಪರಾಶಕ್ತಿ ಭಕ್ತ ಮಂಡಳಿಯ ಅಧ್ಯಕ್ಷ ಸಿ.ಬಿ ನಾಗರಾಜ್ ಲೋಕಕಲ್ಯಾಣಾರ್ಥವಾಗಿ ಕಳೆದ 19 ವರ್ಷಗಳಿಂದ ಉತ್ಸವವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಆದಿಪರಾಶಕ್ತಿ ಭಕ್ತ ಮಂಡಳಿಯಿಂದ ನೀಡಲಾದ ವಸ್ತ್ರಗಳನ್ನು ಬಡವರಿಗೆ ವಿತರಿಸಿ ಮಾತನಾಡಿದ ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹಬ್ಬ ಹರಿ ದಿನಗಳು, ಜಾತ್ರೆ. ಉತ್ಸವಗಳು, ರಥೋತ್ಸವಗಳಲ್ಲಿ ಎಲ್ಲರೂ ಪಾಲ್ಗೊಳ್ಳುವುದರಿಂದ ಸಮಾಜದಲ್ಲಿ ಸಾಮರಸ್ಯ. ಸೌಹಾರ್ದತೆ ಬೆಳೆಯುತ್ತದೆ ಎಂದರು. ದೇವಾಲಯಗಳಿರುವುದು ದೇವರಿಗಾಗಿ ಅಲ್ಲ. ಭಕ್ತರಿಗಾಗಿ. ನಾವು ದೇವಾಲಯಗಳಿಗೆ ತೆರಳುವುದರಿಂದ ಮಾನಸಿಕ ಶಾಂತಿ. ನೆಮ್ಮದಿ. ಸಮಾಧಾನ ದೊರೆಯುತ್ತದೆ ಎಂದು ತಿಳಿಸಿದರು. ಶ್ರೀ ಆದಿಪರಾಶಕ್ತಿ ಭಕ್ತ ಮಂಡಳಿಯ ಖಜಾಂಚಿ ಅಣ್ಣಪ್ಪ, ಪದಾಧಿಕಾರಿಗಳಾದ ಮಧು, ಜಾನಕಮ್ಮ, ಎನ್. ಕುಮಾರ್, ಶಾರದಮ್ಮ, ಕೃಷ್ಣ ಲಲ್ಲಾ, ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಜೆ. ಸತ್ಯನಾರಾಯಣ ಉತ್ಸವದಲ್ಲಿ ಪಾಲ್ಗೊಂಡಿದ್ದರು. ವಾರ್ಷಿಕ ಉತ್ಸವದ ಅಂಗವಾಗಿ ಶಂಕರಪುರ ಮಾರ್ಕೆಟ್ ರಸ್ತೆ ಸೇರಿದಂತೆ ಸುತ್ತಮುತ್ತಲ ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಪ್ರಾರ್ಥನೆ ಸಲ್ಲಿಸಿದರು.