ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ.

33

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಇಂದು ಬೆಳಗ್ಗೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಒಟ್ಟು ಎಂಟು ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರಿನ ಆಡಳಿತ ವೈದ್ಯಾಧಿಕಾರಿ ಡಾ. ಎಸ್.ಎನ್ ಉಮೇಶ್ ಮನೆಯ ಮೇಲೆಯೂ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ತುಮಕೂರಿನ ನಿವೃತ್ತ ಆರ್‍ಟಿಒ ಅಧಿಕಾರಿ ಎಸ್.ರಾಜು ನಿವಾಸ, ಬೀದರ್ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರವೀಂದ್ರ ನಿವಾಸ, ಬೆಳಗಾವಿ ಜಿಲ್ಲೆಯ ಖಾನಾಪುರದ ತಹಶೀಲ್ದಾರ್ ಪ್ರಕಾಶ್ ಶ್ರೀಧರ್ ಮನೆ ಮೇಲೆಯೂ ದಾಳಿ ನಡೆಸಿದ್ದಾರೆ. ಗದಗ ಜಿಲ್ಲೆಯ ಹಲವುಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಸಲಾಗಿದೆ. ಗದಗ-ಬೆಟಗೇರಿ ನಗರಸಭೆ ಇಂಜಿಯರ್ ಕಚೇರಿ, ನಿವಾಸದ ಮೇಲೆ, ಕಾರ್ಯನಿರ್ವಾಹಕ ಇಂಜಿನಿಯರ್ ಹುಚ್ಚೇಶ್ ಬಂಡಿವಡ್ಡರ್ ನಿವಾಸ, ಕಚೇರಿ, ತೋಟದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಗದಗ, ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ 5 ಕಡೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕರ್ನಾಟಕ ಲೋಕಾಯುಕ್ತ ಈ ಕ್ರಮವನ್ನು ಕೈಗೊಂಡಿದೆ.