ಒಟ್ಟಾವ: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಜಸ್ಟಿನ್ ಟ್ರೂಡೊ ಅವರ ಸ್ಥಾನಕ್ಕೆ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನಿತಾ ಆನಂದ್ ಹೆಸರು ಕೇಳಿಬರುತ್ತಿದೆ. ಸೋಮವಾರ ಪ್ರಧಾನಿ ಹುದ್ದೆಗೆ ಜಸ್ಟಿನ್ ಟ್ರೂಡೊ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಹೊಸ ನಾಯಕನ ಆಯ್ಕೆ ಅನಿವಾರ್ಯವಾಗಿದೆ. ಬರೋಬ್ಬರಿ 10 ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದ ಜಸ್ಟಿನ್ ಟ್ರುಡೋ ರಾಜೀನಾಮೆಗೆ ಒತ್ತಾಯಿಸಿ ಸ್ವಪಕ್ಷದಲ್ಲೇ ಭಿನ್ನಮತ ಸೃಷ್ಟಿಯಾಗಿದ್ದರಿಂದ ರಾಜೀನಾಮೆ ನೀಡಿದ್ದಾರೆ. ಆದರೆ ಲಿಬರಲ್ ಪಕ್ಷ ಹೊಸ ಪ್ರಧಾನಿ ಆಯ್ಕೆ ಮಾಡುವವರೆಗೆ ತಾನೇ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆನಡಾದ ಮುಂದಿನ ಪ್ರಧಾನಿ ಯಾರು ಎಂಬ ಲೆಕ್ಕಾಚಾರ ಶುರುವಾಗಿದೆ. ಮಾರ್ಚ್ 24ರಂದು ನೂತನ ಪ್ರಧಾನಿ ಆಯ್ಕೆಯಾಗಲಿದ್ದಾರೆ. ಸಾರಿಗೆ ಮತ್ತು ಆಂತರಿಕ ವ್ಯವಹಾರಗಳ ಖಾತೆ ಸಚಿವರಾಗಿರುವ ಅನಿತಾ ಆನಂದ್, ಜೊತೆಗೆ, ಕ್ರಿಸ್ಟಿನಾ ಫ್ರೀಲ್ಯಾಂಡ್, ಡೊಮಿನಿಕ್ ಲೆಬ್ಲಾಂಕ್, ಫ್ರಾಂಕೋಯಿಸ್ ಫಿಲಿಪ್ ಚಾಂಪೇನ್, ಮಾಕ್ ಕೆರ್ನಿ ಮತ್ತು ಮೆಲೈನ್ ಜೋಲಿ ಹೆಸರು ಕೂಡಾ ಚಾಲ್ತಿಯಲ್ಲಿದೆ. 2019ರಿಂದ ಸಂಸದರಾಗಿರುವ ಅನಿತಾ ಆನಂದ್ ಕೆನಡಾದ ಲಿಬರಲ್ ಪಾರ್ಟಿಯ ಹಿರಿಯ ಸದಸ್ಯೆರಾಗಿದ್ದಾರೆ. ಸಾರ್ವಜನಿಕ ಸೇವೆ ಮತ್ತು ನೇಮಕಾತಿ, ರಾಷ್ಟ್ರೀಯ ರಕ್ಷಣೆ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ಖಜಾನೆ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2024ರಿಂದ ಅವರು ಸಾರಿಗೆ ಮತ್ತು ಆಂತರಿಕ ವ್ಯಾಪಾರ ಖಾತೆಯ ಸಚಿವರಾಗಿದ್ದಾರೆ.










