ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇಳೆ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿದಂತೆ 16 ಕಡೆ ಹಲವರ ಮನೆ, ಕಚೇರಿಗಳು, ಆಸ್ಪತ್ರೆ ಮೇಲೆ ಎನ್ ಐಎ ದಾಳಿಮಾಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ವರ್ಷ 2022ರ ಜುಲೈ ತಿಂಗಳಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಅಂಶ ಬಹಿರಂಗವಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐಎ ಅಧಿಕಾರಿಗಳು ಫುಲ್ವಾರಿ ಶರೀಫ್ ಎಂಬುವವನನ್ನು ಬಂಧಿಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಮಾರ್ಚ್ ತಿಂಗಳಲ್ಲಿ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ದಾಳಿ ನಡೆಸಿದ್ದರು. ವಿಧ್ವಂಸಕ ಕೃತ್ಯ ಎಸಗಲು ಹಣಕಾಸಿನ ನೆರವು ಒದಗಿಸಿರಬಹುದು ಎಂಬ ಗುಮಾನಿಯ ಮೇರೆಗೆ ಬಂಟ್ವಾಳ ಮೂಲದ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ನಾಲ್ವರ ಮನೆ ಮೇಲೆ ದಾಳಿ ಮಾಡಿ ಬಂಧಿಸಿದ್ದರು.
ಪ್ರಸ್ತುತ ದಾಳಿ ಸಂದರ್ಭದಲ್ಲಿ ಹಲವು ಡಿಜಿಟಲ್ ಸಾಕ್ಷ್ಯಗಳು ಮತ್ತು ಕೊಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದ ಬಗ್ಗೆ ದಾಖಲೆಗಳನ್ನು ಎನ್ಐಎ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.










