ಮೋದಿ ನೇತೃತ್ವದ ಸರ್ಕಾರ ಗೋಹತ್ಯೆ ನಿಷೇದ ಜಾರಿ ಮಾಡುವುದಾಗಿ ಹೇಳುತ್ತಲೇ ಬಂದಿದೆ, ಯಾವುದು ಕಾರ್ಯಗತಕ್ಕೆ ಬಂದಿಲ್ಲ :ಬಿ.ಎಸ್.ಪಿ ರಾಜ್ಯಾಧ್ಯಕ್ಷ ಡಾ.ಕೃಷ್ಣ ಮೂರ್ತಿ.

641
firstsuddi
  •   ವರದಿ : ಕಡಿದಾಳ್ ಪುನೀತ್

ಮೂಡಿಗೆರೆ: ಪಟ್ಟಣದ ಶಾದಿ ಮಹಲ್‍ನಲ್ಲಿ ಬಹುಜನ ಸಮಾಜವಾದಿ ಪಕ್ಷ ಹಾಗೂ ಟಿಪ್ಪು ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಸ್.ಪಿ ರಾಜ್ಯಾಧ್ಯಕ್ಷ ಡಾ.ಕೃಷ್ಣಮೂರ್ತಿ ಅವರು ಟಿಪ್ಪು ಬಗ್ಗೆ ಮಾತನಾಡುವ ಅರ್ಹತೆ ಬಿಜೆಪಿಯವರಿಗೆ ಖಂಡಿತವಾಗಿಯೂ ಇಲ್ಲ. ಇರುವ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯ ಬಿಜೆಪಿಯವರಿಗೆ ಇಲ್ಲ, ಆದರೆ ಬೇಡದ ಸಂಗತಿಗಳನ್ನು ನಿರ್ಮಾಣ ಮಾಡಿ ಸಮಸ್ಯೆ ಸೃಷ್ಟಿ ಮಾಡಿ ಸಮಾಜದಲ್ಲಿ ಅರಾಜಕತೆ ಉಂಟುಮಾಡುತ್ತಿದ್ದಾರೆ ಎಂದರು. ಗೋಹತ್ಯೆ ನಿಷೇಧವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವ ಬಿಜೆಪಿ ಎಂದರು. ಭಾರತದ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಸರ್ಕಾರ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ಗೋಹತ್ಯೆ ನಿಷೇದ ಜಾರಿ ಮಾಡುವುದಾಗಿ ಹೇಳುತ್ತಲೇ ಬಂದಿದೆ. ಆದರೆ ಯಾವುದು ಕಾರ್ಯಗತಕ್ಕೆ ಬಂದಿಲ್ಲ. ಇದೇ ವಿಷಯದಲ್ಲಿ ಹಿಂದೂ ಯುವಕರನ್ನು ಎತ್ತಿಕಟ್ಟಿ ಜಾತಿ ರಾಜಕರಣ ಮಾಡುತ್ತಿದೆ. ಇದೀಗ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕೂಡ ಗೋಹತ್ಯೆ ಮತ್ತು ಟಿಪ್ಪು ಜಯಂತಿಯನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲು ಬಿಜೆಪಿ ಸಿದ್ಧವಾಗಿದ್ದು ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಮುಂದುವರೆದು ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಟಿಪ್ಪುವಿನ ಪೇಟ ಧರಿಸಿಕೊಂಡು ಖಡ್ಗ ಹಿಡಿದು ವೇದಿಕೆಯಲ್ಲಿ ವಿಜ್ರಂಭಿಸಿದ ಯಡಿಯೂರಪ್ಪ, ಶೋಭಾಕರಂದ್ಲಾಜೆ ಅವರಿಗೆ ಅಧಿಕಾರ ಬಂದ ಕೂಡಲೇ ತಾವು ಮಾಡಿರುವುದನ್ನು ಮರೆತು ಟಿಪ್ಪು ಜಯಂತಿಯನ್ನು ನಿಷೇಧ ಮಾಡಿದ್ದಾರೆ. ಇದು ಅವಿವೇಕಿಗಳು ಮಾಡುವ ಕೆಲಸ ಎಂದರು. ಪಠ್ಯ ಪುಸ್ತಕಗಳಲ್ಲಿ ಟಿಪ್ಪುವಿನ ಹೆಸರನ್ನು ತೆಗೆದ ಮಾತ್ರಕ್ಕೆ ಸಾಧನೆ ಮಾಡಿದಂತೆ ಅಲ್ಲ, ಸಾಧ್ಯವಿದ್ದರೆ ಸಂವಿಧಾನದಿಂದ ಹೆಸರು ತೆಗೆಸಲಿ ಎಂದರು. ಟಿಪ್ಪು 38 ಸಾವಿರ ಹಿಂದೂ ದೇವಾಲಯಗಳನ್ನು ಕೆಡವಿಸಿದ್ದಾನೆ ಎಂದು ಬೊಬ್ಬೆ ಇಡುವ ಬಿಜೆಪಿಯವರು ಟಿಪ್ಪು ಕೆಡವಿದ 38 ಸಾವಿರ ದೇವಾಲಯಗಳ ಪೈಕಿ 38 ದೇವಾಲಯಗಳನ್ನು ತೋರಿಸಲಿ ಎಂದು ಸವಾಲು ಹಾಕಿದರು. ಹಿಂದೂ ಸಾಧು-ಸಂತರು ಧಾರ್ಮಿಕ ಅಂಶಗಳನ್ನು ಜನತೆಗೆ ಪರಿಚಯಿಸುವ ಬದಲು ಬಿಜೆಪಿಯ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ, ಇದು ಹಿಂದೂ ಸಂಪ್ರದಾಯವನ್ನು ಅವಮಾನಗೊಳಿಸಿದಂತೆ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ್ ಬಕ್ಕಿ, ಸ್ವಾಗತವನ್ನು ಮಹೇಶ್ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎಸ್.ಪಿ ಪಕ್ಷದ ತಾಲ್ಲೂಕು ಅಧ್ಯಕ್ಷ ಲೋಕವಳ್ಳಿ ರಮೇಶ್ ವಹಿಸಿದ್ದರು. ಉದ್ಘಾಟನೆಯನ್ನು ಮೌಲಾನ ಮಜೀದ್ ಆಲಿ ಮಾಡಿದರು. ಮೂಡಿಗೆರೆಯ ವಿವಿಧ ಮಸೀದಿಗಳ ಧರ್ಮಗುರುಗಳು ಆಗಮಿಸಿದ್ದರು. ವಂದನಾರ್ಪಣೆಯನ್ನು ಪರಮೇಶ್ ಮಾಡಿದರು. ಮುಸ್ಲಿಂ ಧರ್ಮಗುರು ಮೌಲಾನ ಅಜೀದ್ ಆಲಿ, ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಹಮದ್ ಖಾಂಡೆ, ಮಂಜಯ್ಯ, ಇಬ್ರಾಹಿಂ, ಅಕ್ರಂ ಹಾಜಿ, ನಿವೃತ್ತ ಸೈನಿಕ ಷೇಕ್, ಫಿಶ್ ಮೋಣು, ರಮೇಶ್, ಖಲೀಮುಲ್ಲಾ, ಬಿಳಗುಳ ಅಲ್ತಾಫ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮೂಡಿಗೆರೆ ಸುತ್ತಮುತ್ತ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ಫಿಶ್ ಮೋಣು, ಹಂಡುಗುಳಿ ಉಮರಬ್ಬಾ, ಅಲ್ತಾಫ್, ಶೇಕ್ ಅಹಮದ್, ಹೆಚ್.ಪಿ.ರಮೇಶ್, ಕಿರುಗುಂದ ಅಬ್ಬಾಸ್ ಅವರನ್ನು ಸನ್ಮಾನಿಸಲಾಯಿತು.