ಚಿಕ್ಕಮಗಳೂರು : ಎಲ್ಲಾ ಜಾತಿ, ಧರ್ಮ ಮತ್ತು ಮತದವರೂ ಭಾವೈಕ್ಯತೆಯನ್ನು ಮೆರೆದು ಒಂದಾಗಿ ಸಾಗಿದರೆ ಮಾತ್ರ ರಾಷ್ಟ್ರದ ಅಭಿವೃದ್ದಿಯಾಗುತ್ತದೆ : ಬಿ.ಬಿ.ಪತ್ತಾರ್.

287
firstsuddi

ಚಿಕ್ಕಮಗಳೂರು : ಪೋಷಕರು ಮತ್ತು ಶಿಕ್ಷಕರು ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳಲ್ಲಿ ಭಾವೈಕ್ಯತೆಯನ್ನು ಬಿತ್ತಿದರೆ ಭವಿಷ್ಯದಲ್ಲಿ ದೇಶ ಒಗ್ಗಟ್ಟಿನಿಂದ ಸಾಗಲು ಸಾಧ್ಯವಾಗುತ್ತದೆ ಎಂದು ಸಂಸದೀಯ ವ್ಯವಹಾರಗಳ ಮತ್ತು ಶಾಸನ ರಚನಾ ಇಲಾಖೆಯ ನಿವೃತ್ತ ವಿಶೇಷ ಕಾರ್ಯದರ್ಶಿ ಬಿ.ಬಿ.ಪತ್ತಾರ್ ಸಲಹೆ ಮಾಡಿದರು.
ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ಹಮ್ಮಿಕೊಂಡಿರುವ ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹಕ್ಕೆ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಹಾಗೂ ತಂತ್ರಜ್ಞಾನದಲ್ಲಿ ಬಹಳಷ್ಟು ಮುಂದುವರೆದಿದೆ ಆದರೆ ಇತ್ತೀಚಿನ ವರ್ಷಗಳಲ್ಲಿ ಪರಂಪರೆಯಾಗಿ ಬಂದ ಭಾವೈಕ್ಯತೆಯನ್ನು ಮುಂದುವರೆಸುವಲ್ಲಿ ವಿಫಲವಾಗಿದೆ, ಇದರಿಂದಾಗಿ ದೇಶದ ಐಕ್ಯತೆಗೆ ಧಕ್ಕೆಯುಂಟಾಗಿದೆ ಎಂದು ವಿಷಾದಿಸಿದರು.
ಅನೇಕತೆಯಲ್ಲಿ ಏಕತೆ ಕಂಡಿರುವ ಭಾರತ ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ, ಇಲ್ಲಿ ಎಲ್ಲಾ ಜಾತಿ, ಧರ್ಮ ಮತ್ತು ಮತದವರೂ ಭಾವೈಕ್ಯತೆಯನ್ನು ಮೆರೆದು ಒಂದಾಗಿ ಸಾಗಿದರೆ ಮಾತ್ರ ರಾಷ್ಟ್ರದ ಅಭಿವೃದ್ದಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಮಾತನಾಡಿ ಮಕ್ಕಳು ಎಳೆಯ ವಯಸ್ಸಿನಿಂದಲೇ ಭಾವೈಕ್ಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಸಪ್ತಾಹದ ಅಂಗವಾಗಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ 7 ದಿನಗಳ ಕಾಲ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು, ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದರು.
ಸೇವಾದಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ವಿವಿಧ ಶಾಲೆಗಳ ಶಿಕ್ಷಕರಾದ ಕಾಳಯ್ಯ, ದೊಡ್ಡಪ್ಪ, ಆಸೀಫ್ ಆಲಿ ಮತ್ತು ರಾಜಶೇಖರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ಜಿಲ್ಲಾ ಸಂಘಟಕ ಚಂದ್ರಕಾಂತ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶಪ್ಪ, ತಾಲ್ಲೂಕು ಅಧ್ಯಕ್ಷ ಕಾಳಯ್ಯ, ಶಿಕ್ಷಕಿ ನಾಗವೇಣಿ ಉಪಸ್ಥಿತರಿದ್ದರು.