ಯಡಿಯೂರಪ್ಪ, ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ – ಮರು ವಿಚಾರಣೆಗೆ ಹೈಕೋರ್ಟ್ ಆದೇಶ…

48
firstsuddi

ಬೆಂಗಳೂರು : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣದ ಮರು ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಹಾಗೂ ಅವರ ಕುಟುಂಬದ ಕೆಲ ಸದಸ್ಯರು ಹಾಗೂ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಒಂಬತ್ತು ಜನರು ಬಿಡಿಎ ಪ್ರಾಧಿಕಾರದ ವಸತಿ ಯೋಜನೆಗಾಗಿ ಖಾಸಗಿ ಕಂಪನಿಗಳ ಜೊತೆಗಿನ ಒಪ್ಪಂದದಲ್ಲಿ ಲಂಚ ಪಡೆದಿದ್ದಾರೆ. ಈ ಕುರಿತು ಎಫ್ ಐಆರ್ ದಾಖಲಿಸಿ ತನಿಖೆಗೆ ಆದೇಶಿಸುವಂತೆ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು.

ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಅಬ್ರಾಹಾಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಖಾಸಗಿ ಅರ್ಜಿಯನ್ನು 2021ರ ಜುಲೈನಲ್ಲಿ ಕೋರ್ಟ್ ವಜಾ ಮಾಡಿತ್ತು. ಯಡಿಯೂರಪ್ಪ ಮತ್ತು ಇತರ 8 ಜನರ ವಿರುದ್ಧದ ಸಲ್ಲಿಕೆಯಾಗಿರುವ ಭ್ರಷ್ಟಾಚಾರ ಆರೋಪ ದೂರಿಗೆ ರಾಜ್ಯಪಾಲರ ಅನುಮೋದನೆ ಇಲ್ಲದ ಕಾರಣ ದೂರನ್ನು ಪರಿಗಣಿಸುವುದಿಲ್ಲ ಎಂದು ಕೋರ್ಟ್ ಹೇಳಿತ್ತು.

ಈ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಅಂಗೀಕರಿಸಿರುವ ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನೀಡಿದ್ದ ಆದೇಶವನ್ನು ರದ್ದು ಮಾಡಿ ಮರು ವಿಚಾರಣೆ ನಡೆಸುವಂತೆ ಆದೇಶ ನೀಡಿದ್ದಾರೆ.