ರಣಬೀರ್ ಕಪೂರ್, ಆಲಿಯಾ ಭಟ್ ನಟನೆಯ ಮತ್ತು ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆಯಾಗಲಿದೆ. ಈ ನಿಟ್ಟಿನಲ್ಲಿ ಪ್ರಾರ್ಥನೆ ಸಲ್ಲಿಸಲು ಮಧ್ಯಪ್ರದೇಶದ ಉಜ್ಜೈನ್ ನ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಭಜರಂಗದಳ ಕಾರ್ಯಕರ್ತರು ದೇವಸ್ಥಾನ ಪ್ರವೇಶಿಸದಂತೆ ತಡೆದಿದ್ದಾರೆ.
ಗೋಮಾಂಸ ತಿನ್ನುತ್ತೇನೆ ಎಂದು ಎಂಬ ರಣಬೀರ್ ಹೇಳಿಕೆಯನ್ನು ಖಂಡಿಸಿ ಭಜರಂಗದಳ ಕಾರ್ಯಕರ್ತರು ಕಪ್ಪು ಬಾವುಟ ಹಿಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಹಿಂದೂಗಳು ದೇವರು ಎಂದು ಪೂಜಿಸುವ ಗೋವಿನ ಮಾಂಸವನ್ನು ತಿನ್ನುವ ರಣಬೀರ್ ನಮ್ಮ ದೇವಸ್ಥಾನಗಳಿಗೆ ಬರುವುದು ಬೇಡವೆಂದು ಭಜರಂಗದಳ ಕಾರ್ಯಕರ್ತರು ತಡೆದಿದ್ದಾರೆ. ನಂತರ ನಿರ್ದೇಶಕ ಅಯಾನ್ ಮತ್ತು ತಂಡಕ್ಕೆ ಮಾತ್ರವೇ ಮಹಾಕಾಳೇಶ್ವರನ ಆಶೀರ್ವಾದ ಪಡೆಯಲು ಅವಕಾಶ ನೀಡಲಾಯಿತು. ಆದರೆ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದೇವರ ದರ್ಶನವನ್ನು ಪಡೆಯದೇ ವಾಪಸ್ ಬರಬೇಕಾಯಿತು.
ರಣಬೀರ್ ಕಪೂರ್ ಈ ಹಿಂದೆ ಸಂದರ್ಶನವೊಂದರಲ್ಲಿ ಗೋಮಾಂಸದ ಬಗ್ಗೆ ಮಾತನಾಡಿದ್ದರು. ನನ್ನ ಕುಟುಂಬವು ಪೇಶಾವರದಿಂದ ಬಂದಿದೆ. ನನಗೆ ಬೀಫ್ ಅಂದರೆ ತುಂಬಾ ಇಷ್ಟ ಎಂದು ಹೇಳಿದ್ದರು. ಈ ಮಾತಿಗೆ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ.










