ಬೆಂಗಳೂರು : ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಕ್ಕೆ ಬರುತ್ತಾರಾ ಎಂಬ ಚರ್ಚೆಗೆ ಸ್ವತಃ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೇ ಸ್ಪಷ್ಟನೆ ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ನಗರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಮರಳುತ್ತೇನೆ ಎನ್ನುವುದು ಕೇವಲ ಊಹಾಪೋಹವಾಗಿದ್ದು, ಯಾವುದೇ ಕಾರಣಕ್ಕೂ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ. ನರೇಂದ್ರ ಮೋದಿ ಅವರು ನನಗೆ ಕೃಷಿ ಇಲಾಖೆ ಜವಾಬ್ದಾರಿ ಕೊಟ್ಟಿದ್ದಾರೆ. ಅನೇಕ ರಾಜ್ಯಗಳಲ್ಲಿ ಚುನಾವಣೆ ಉಸ್ತುವಾರಿಯನ್ನು ನನಗೆ ಕೊಟ್ಟಿದ್ದಾರೆ. ನಾನು ಇದ್ರಲ್ಲಿ ಖುಷಿಯಾಗಿ ಇದ್ದೇನೆ ಎಂದರು.
ಹಿಜಾಬ್ ಕೋಮು ಗಲಭೆ ಅಲ್ಲ. ಕೆಲ ಸಂಘಟನೆಗಳಾದ ಪಿಎಫ್ ಐ, ಎಸ್ ಎಇಪಿಐ ಸಂಘಟನೆಗಳ ಷಡ್ಯಂತ್ರ. ಈಗಾಗಲೇ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸರ್ಕಾರಿ ಶಾಲೆಗೆ ಹೋಗುವಾಗ ಎಲ್ಲ ಮಕ್ಕಳು ಒಂದೇ. ಶಾಲೆಗೆ ಹೋಗುವಾಗ ಯೂನಿಫಾರ್ಮ್ ಧರಿಸಬೇಕು ಅಂತ ಹೇಳಿದೆ. ಅದನ್ನು ಎಲ್ಲರೂ ಪಾಲಿಸಬೇಕು ಎಂದರು.
ಪಠ್ಯ ಪುಸ್ತಕ ವಿಚಾರದಲ್ಲಿ ಕುವೆಂಪು, ಬಸವಣ್ಣ ಅವರನ್ನು ಅವಹೇಳನ ಮಾಡಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಸವಣ್ಣ, ಕುವೆಂಪು ಇಬ್ಬರಿಗೂ ಅವಮಾನ ಮಾಡುವ ವಿಚಾರವೇ ಇಲ್ಲ. ಸರ್ಕಾರ ಕುವೆಂಪು ಅವರಿಗೆ ಗೌರವ ಕೊಡುತ್ತಿದೆ. ಬಸವಣ್ಣ ಅಂದರೆ ವಿಶೇಷ ಗೌರವ ಇದೆ. ಪ್ರತೀ ಕಾರ್ಯಕ್ರಮದಲ್ಲಿ ಅವರನ್ನು ಪೂಜಿಸಲಾಗುತ್ತಿದೆ. ಪ್ರತಿ ಭಾರಿಯೂ ಅವರನ್ನು ಬಸವಣ್ಣ ಎಂದು ಕರೆಯುವ ಕೆಲಸ ಮಾಡೋಣ ಎಂದರು.










