ಸಿಇಟಿ ಪರೀಕ್ಷೆಗೆ ಹಿಜಾಬ್ ನಿಷೇಧ…

49
firstsuddi

ಬೆಂಗಳೂರು : ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿಗೆ ನಡೆಯುವ ಸಿಇಟಿ ಪರೀಕ್ಷೆಗೆ ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ. ಒಂದು ವೇಳೆ ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಜೂನ್ 16, 17 ಮತ್ತು 18ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ಪಿಎಸ್ ಐ ಹಾಗೂ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ತೀರ್ಮಾನಿಸಲಾಗಿದೆ. ಸಿಇಟಿಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಹದ್ದಿನ ಕಣ್ಣಿಡಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.

ನೀಟ್ ಪರೀಕ್ಷೆ ಮಾದರಿಯಲ್ಲೇ ಸಿಇಟಿ ನಡೆಸಲಾಗುತ್ತದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮಾಂಗಲ್ಯ ಸರ, ಮೂಗುತಿ, ಓಲೆ, ಸರ, ಬಳೆ ಸೇರಿದಂತೆ ಯಾವುದೇ ರೀತಿಯ ಆಭರಣ ಧರಿಸಿ ಬರುವಂತಿಲ್ಲ. ಜೊತೆಗೆ ವಾಚ್, ಕ್ಯಾಲ್ಕುಲೇಟರ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ. ಅಲ್ಲದೇ ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಹಾಗೂ ಮೆಟಲ್ ಡಿಟೆಕ್ಟರ್ ಗಳನ್ನು ಅಳವಡಿಕೆ ಮಾಡಲಾಗುತ್ತಿದೆ.