ನಟ ರಜನಿಕಾಂತ್ ಅವರ ಪುತ್ರಿ, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಅವರ ಮನೆಯಲ್ಲಿ ಕಳ್ಳತನವಾಗಿದೆ.
ಈ ಬಗ್ಗೆ ಐಶ್ವರ್ಯಾ ಅವರು ಚೆನ್ನೈನ ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ತೆನಾಂಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
2019 ರಲ್ಲಿ ತನ್ನ ತಂಗಿ ಸೌಂದರ್ಯಾಳ ಮದುವೆಗೆ ಬಳಸಿದ ನಂತರ ಆಭರಣಗಳನ್ನು ತನ್ನ ಲಾಕರ್ ನಲ್ಲಿ ಇರಿಸಿದ್ದೆ. ಲಾಕರ್ ಅನ್ನು ಮೂರು ಬಾರಿ ಸ್ಥಳಾಂತರಿಸಲಾಗಿದೆ. ಆಗಸ್ಟ್ 2021 ರಂದು ಸಿಐಟಿ ನಗರದಲ್ಲಿರುವ ಮಾಜಿ ಪತಿ ಧನುಷ್ ಫ್ಲಾಟ್ ಗೆ ತೆಗೆದುಕೊಂಡು ಹೋಗಲಾಗಿತ್ತು. ಬಳಿಕ ಸೆಪ್ಟೆಂಬರ್ 2021 ರಲ್ಲಿ ಸೇಂಟ್ ಮೇರಿಸ್ ರಸ್ತೆಯ ಅಪಾರ್ಟ್ ಮೆಂಟ್ ಗೆ ಸ್ಥಳಾಂತರಿಸಲಾಯಿತು. ಏಪ್ರಿಲ್ 9, 2022 ರಂದು, ಲಾಕರ್ ನಟ ರಜನಿಕಾಂತ್ ಅವರ ಬೋಯಸ್ ಗಾರ್ಡನ್ ನಿವಾಸಕ್ಕೆ ಸ್ಥಳಾಂತರಗೊಂಡಿತು. ಲಾಕರ್ ನ ಕೀಗಳನ್ನು ಸೇಂಟ್ ಮೇರಿಸ್ ರಸ್ತೆಯ ಫ್ಲಾಟ್ ನಲ್ಲಿರುವ ನನ್ನ ವೈಯಕ್ತಿಕ ಕಬ್ಬಿಣದ ಕಪಾಟಿನಲ್ಲಿ ಇರಿಸಲಾಗಿತ್ತು. ಫೆಬ್ರವರಿ 10, 2023ರಂದು ಲಾಕರ್ ತೆರೆದಾಗ ಆಭರಣಗಳು ಕಳ್ಳತನವಾಗಿರುವುದು ತಿಳಿದುಬಂದಿದೆ ಐಶ್ವರ್ಯಾ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ನಾನು ಚಿನ್ನಾಭರಣಗಳು, ವಜ್ರ ಮತ್ತು ನವರತ್ನದ ಆಭರಣಗಳನ್ನು ಲಾಕರ್ ನಲ್ಲಿ ಇಟ್ಟ ವಿಚಾರ ಮನೆಯಲ್ಲಿ ಕೆಲಸ ಮಾಡುವವರಿಗೆ ಗೊತ್ತಿತ್ತು. ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರೇ ಕಳ್ಳತನ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ದೂರಿನ ಅನ್ವಯ ತೆನಾಂಪೇಟೆ ಪೊಲೀಸರು ಐಪಿಸಿ ಸೆಕ್ಷನ್ 381 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಎಫ್‍ಐಆರ್ ನಲ್ಲಿ ನಮೂದಿಸಿರುವಂತೆ ಕಳ್ಳತನವಾದ ಚಿನ್ನಾಭರಣಗಳ ಅಂದಾಜು ಮೌಲ್ಯ 3.6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.










