ರೈಲ್ವೆ ನಿಲ್ದಾಣದಲ್ಲಿ ಅಶ್ಲೀಲ ವಿಡಿಯೋ ಪ್ರಸಾರ – ಮುಜುಗರಕ್ಕೀಡಾದ ಪ್ರಯಾಣಿಕರು…

59
firstsuddi

ಪಾಟ್ನಾ : ಬಿಹಾರದ ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಟಿವಿ ಪರದೆಯಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾಗಿದ್ದರಿಂದ ನೂರಾರು ಪ್ರಯಾಣಿಕರು ಮುಜುಗರಕ್ಕೀಡಾದ ಪ್ರಸಂಗ ನಡೆದಿದೆ.

ನಿನ್ನೆ ಬೆಳಗ್ಗೆ 9:30ರ ವೇಳೆಗೆ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 10 ರಲ್ಲಿ ಮಾತ್ರವೇ ಅಶ್ಲೀಲ ವಿಡಿಯೋ ಪ್ರದರ್ಶನವಾಗಿದೆ. ಘಟನೆ ನಡೆದ ತಕ್ಷಣವೇ ಪ್ರಯಾಣಿಕರು ಈ ಬಗ್ಗೆ ಸರ್ಕಾರಿ ರೈಲ್ವೆ ಪೊಲೀಸ್ ಹಾಗೂ ರೈಲ್ವೆ ರಕ್ಷಣಾ ಪಡೆಗೆ ದೂರು ನೀಡಿದ್ದಾರೆ.

ಬಳಿಕ ರೈಲ್ವೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಜಾಹೀರಾತು ಪ್ರಸಾರ ಮಾಡಲು ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಗೊಳಿಸಿದ್ದಾರೆ ಮತ್ತು ಜಾಹೀರಾತು ಪ್ರದರ್ಶನ ಮಾಡುವ ಸಂಸ್ಥೆ ದತ್ತಾ ಕಮ್ಯುನಿಕೇಷನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಈ ಅಚಾತುರ್ಯ ಘಟನೆಯನ್ನು ದೃಢಪಡಿಸಿದ ಡಣಾಪುರ ಡಿಆರ್‌ಎಂ ಕಚೇರಿಯ ಅಧಿಕೃತ ವಕ್ತಾರ ಪ್ರಭಾತ್ ಕುಮಾರ್, ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿದ್ದೇವೆ ಮತ್ತು ಒಪ್ಪಂದ ರದ್ದತಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.