ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿ ಟಿಕೆಟ್ – ಗುಜರಾತ್‍ನ ಜಾಮ್‌ನಗರ ಉತ್ತರದಿಂದ ಸ್ಪರ್ಧೆ…

101
firstsuddi

ಗಾಂಧೀನಗರ : ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಅವರಿಗೆ ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಯಿಂದ ಟಿಕೆಟ್ ಸಿಕ್ಕಿದೆ. ಗುಜರಾತ್ ನ ಜಾಮ್ ನಗರ ಉತ್ತರದಿಂದ ರಿವಾಬಾ ಜಡೇಜಾ ಸ್ಪರ್ಧಿಸಲಿದ್ದಾರೆ. 2016ರಲ್ಲಿ ಜಡೇಜಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಿವಾಬಾ ಜಡೇಜಾ ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರೆ. ಅವರು 2019ರಂದು ಬಿಜೆಪಿ ಸೇರಿದರು.

ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಮೊದಲ ಪಟ್ಟಿ 160 ಮಂದಿ ಅಭ್ಯರ್ಥಿಗಳನ್ನು ಒಳಗೊಂಡಿದ್ದು, ಈ ಪೈಕಿ 69 ಮಂದಿ ಹಾಲಿ ಶಾಸಕರಿದ್ದು, 13 ಪರಿಶಿಷ್ಟ ಜಾತಿ ಅಭ್ಯರ್ಥಿಗಳು, 24 ಪರಿಶಿಷ್ಟ ಪಂಗಡದ ಸಮುದಾಯ ಹಾಗೂ 14 ಮಂದಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ.

ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿದ ಕೇಂದ್ರ ಸಚಿವರಾದ ಮನ್ಸುಖ್ ಮಾಂಡವಿಯಾ, ಭೂಪೇಂದರ್ ಯಾದವ್ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಘಟ್ಲೋಡಿಯಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಗೃಹ ಸಚಿವ ಹರ್ಷ ಸಂಘವಿ ಮಜುರಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಹಾರ್ದಿಕ್ ಪಟೇಲ್ ವಿರಾಮಗಮ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

182 ಸ್ಥಾನಗಳ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಈ ಹಿನ್ನಲೆ ನಿನ್ನೆ ಕೇಂದ್ರ ಚುನಾವಣಾ ಸಮಿತಿ ದೆಹಲಿಯಲ್ಲಿ ಸಭೆ ನಡೆಸಿತ್ತು. ಸಭೆಯ ಬಳಿಕ ಇಂದು ಒಂದೇ ಹಂತದಲ್ಲಿ 160 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ.