ಕಳಸ : ಕಳೆದ 12 ವರ್ಷಗಳಿಂದ ಉತ್ತಮ ರಸ್ತೆಗಾಗಿ ಹೋರಾಟ ಮಾಡಿ ಫಲ ಕಾಣದೇ ಬೇಸೆತ್ತ ತಲಗೋಡು ಗ್ರಾಮಸ್ಥರು ಮುಂಬರುವ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಈ ಬಗ್ಗೆ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರನ್ನು ಹಾಕಲಾಗಿದೆ.
ತಾಲ್ಲೂಕಿನ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ರಸ್ತೆ ತಲಗೋಡು-ತೋಟದೂರು ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆ ಇದಾಗಿದೆ. 12 ಕಿ.ಮೀ ಉದ್ದದ ಈ ರಸ್ತೆ ತಲಗೋಡಿನಿಂದ ಬಾಳೆಕೊಂಡ, ಹಳ್ಳದಾಚೆ, ನೆಲ್ಲಿಕೋಟ, ತೋಟದೂರು ಮುಖ್ಯ ರಸ್ತೆಗೆ ಸಂಪರ್ಕಿಸುತ್ತದೆ.
ಅನೇಕ ವರ್ಷಗಳ ಹಿಂದೆ ಈ ರಸ್ತೆಗೆ ಡಾಮಾರೀಕರಣ ನಡೆದ ಬಳಿಕ ಮತ್ತೆ ಈ ರಸ್ತೆ ದುರಸ್ಥಿಯ ಮುಖ ಮಾಡಲಿಲ್ಲ. ಕಿತ್ತು ಹೋಗಿರುವ ಜಲ್ಲಿಯಿಂದ ರಸ್ತೆಯ ಮೂಲ ಸ್ವರೂಪವೇ ಬದಲಾಗಿದೆ. ಸುಮಾರು 100ಕ್ಕೂ ಹೆಚ್ಚು ಮನೆಗಳಿವ ಈ ರಸ್ತೆಯನ್ನು ನೂರಾರು ಗ್ರಾಮಸ್ಥರು ಅವಲಂಬಿಸಿದ್ದಾರೆ. ಮಳೆಗಾಲದಲ್ಲೂಂತೂ ರಸ್ತೆಯು ಹೊಳೆಯನ್ನು ನೆನೆಪಿಸುತ್ತದೆ. ಶಾಲಾ ಸಮಯದಲ್ಲಿ ಮಕ್ಕಳು ಗುಂಡಿ ಗೊಟರುಗಳಿಂದ ಕೂಡಿದ ರಸ್ತೆಯಲ್ಲಿ ಅನಿವಾರ್ಯವಾಗಿ ಪ್ರಯಾಣ ಬೆಳೆಸಬೇಕಾಗಿದೆ. ರಸ್ತೆಯ ಪರಿಸ್ಥಿಯನ್ನು ಗಮನಿಸಿ ಯಾವುದೇ ಬಾಡಿಗೆ ವಾಹನಗಳು ಈ ರಸ್ತೆಗೆ ಬರಲು ಒಪ್ಪೋದಿಲ್ಲ.
ಈ ರಸ್ತೆಯ ದುರಸ್ಥಿಗಾಗಿ ಅದೆಷ್ಟೋ ವರ್ಷಗಳಿಂದ ಜನ ಶಕ್ತಿ ಗ್ರಾಮ ವಿಕಾಸ ಸಮಿತಿಯನ್ನು ಹುಟ್ಟು ಹಾಕಿ ಊರಿನ ರಸ್ತೆಗಾಗಿ ಪಕ್ಷಾತೀತವಾಗಿ ಹೋರಾಟ ಮಾಡಿದರೂ ಕೂಡ ಫಲ ಕಾಣದ ಗ್ರಾಮಸ್ಥರು ಮತ್ತು ಸಮಿತಿಯ ಸದಸ್ಯರು ಈ ಬಾರಿ ಚುನಾವಣಾ ಬಹಿಷ್ಕಾರವನ್ನು ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಹಲವಾರು ವರ್ಷಗಳಿಂದ ಹೋರಾಟದ ಮುಖಂತರ ಈ ರಸ್ತೆಯ ದುರಸ್ಥಿಗಾಗಿ ಅಧಿಕಾರಿಗಳು, ಜನಪ್ರತಿನಿದಿಗಳ ಬಳಿ ಅಂಗಲಾಚಿ ಬೇಡಿಕೊಂಡರೂ ಕೂಡ ನಮ್ಮ ರಸ್ತೆಯ ಪರಿಸ್ಥಿತಿ ಸರಿ ಆಗಲಿಲ್ಲ. ಇದರಿಂದ ಬೇಸತ್ತು ನಾವು ಈ ಬಾರಿ ಚುನಾವಣಾ ಬಹಿಷ್ಕಾರ ಮಾಡುತ್ತಿದ್ದೇವೆ.










