ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಕಳೆದ 1 ತಿಂಗಳಿನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನೆಲೆ, ಅನೇಕ ವಲಯದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಅಂತಹವರಿಗೆ ನೆರವಾಗುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 1,610 ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶಾದ್ಯಂತ ಲಾಕ್‍ಡೌನ್ ಆಗಿರುವ ಪರಿಣಾಮ ಮದುವೆ ಸಮಾರಂಭಗಳು ನಡೆಯದೆ ಇರುವುದರಿಂದ 11,687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದ ಹೂಗಳು ಮಾರಾಟವಾಗದೆ ಹೂ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದು, ಹೀಗಾಗಿ ಹೂ ಬೆಳಗಾರರಿಗೆ ಒಂದು ಹೆಕ್ಟೇರ್‍ಗೆ 25 ಸಾವಿರ ರೂ. ಹಣವನ್ನು ನೀಡಲಾಗುತ್ತದೆ. 1 ಲಕ್ಷದ ಒಳಗಿನ ಸಾಲವನ್ನು ಕಟ್ಟಿದ ನೇಕಾರರಿಗೆ ಕಟ್ಟಿದ ಹಣವನ್ನು ವಾಪಸ್ ನೀಡಲು ಸರ್ಕಾರದಿಂದ ನಿರ್ಧಾರ. ನೇಕಾರ್ ಸಮ್ಮಾನ್ ಯೋಜನೆ ಅಡಿಯಲ್ಲಿ 54 ಸಾವಿರ ಕೈ ಮಗ್ಗ ನೇಕಾರರಿಗೆ ವರ್ಷಕ್ಕೆ 2 ಸಾವಿರ ರೂ ಖಾತೆಗೆ ಹಾಕಲಾಗುವುದು. ಒಟ್ಟಾರೆಯಾಗಿ ನೇಕಾರರಿಗೆ 109 ಕೋಟಿ ರೂ ಸಾಲಮನ್ನಾ ಘೋಷಿಸಲಾಗಿದೆ. ಬೃಹತ್ ಕೈಗಾರಿಕೆಗಳ ವಿದ್ಯುತ್ ಬಿಲ್ ಪಾವತಿ ಬಟ್ಟಿ ರಹಿತವಾಗಿ 2 ತಿಂಗಳಿಗೆ ಮುಂದೂಡಲಾಗಿದೆ. ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆ ಹಾಗೂ ಉದ್ಯಮಗಳ ವಿದ್ಯುತ್ ಬಿಲ್ಲಿನ ಸ್ಥಿರ ಶುಲ್ಕದಲ್ಲಿ 2 ತಿಂಗಳ ಬಿಲ್ ಮನ್ನಾ ಮಾಡಲಾಗಿದೆ. ಲಾಕ್‍ಡೌನ್ ನಿಂದಾಗಿ ಕಳೆದ ಒಂದು ತಿಂಗಳಿನಿಂದ ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿರುವ ಆಟೋ, ಟ್ಯಾಕ್ಸಿ ಚಾಲಕರು, ಕ್ಷೌರಿಕ, ಅಗಸರಿಗೆ 5 ಸಾವಿರ ರೂ ಪರಿಹಾರ ಘೋಷಣೆ ಮಾಡಿದ್ದಾರೆ.










