ರಾಜ್ಯಕ್ಕೆ ನಯಾ ಪೈಸೆ ಬಾಕಿ ಉಳಿಸಿಲ್ಲ, ಸಕಾಲದಲ್ಲಿ ಅನುದಾನವನ್ನು ಕೊಡಲಾಗಿದೆ: ನಿರ್ಮಲಾ ಸೀತಾರಾಮನ್.

34
firstsuddi

ಬೆಂಗಳೂರು: ಕರ್ನಾಟಕಕ್ಕೆ ಒಂದೇ ಒಂದು ರೂಪಾಯಿಯನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿಲ್ಲ. ರಾಜ್ಯಕ್ಕೆ ಸಕಾಲದಲ್ಲಿ ಅನುದಾನವನ್ನು ಕೊಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿ ನಿನ್ನೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಕಿ ಅಂಶದೊಂದಿಗೆ ರಾಜ್ಯ ಸರ್ಕಾರದ ತಾರತಮ್ಯ ಆರೋಪಕ್ಕೆ ವಾಗ್ದಾಳಿ ನಡೆಸಿದರು.

15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ಎಲ್ಲಾ ಹಣವನ್ನು ಕರ್ನಾಟಕಕ್ಕೆ ನೀಡಲಾಗಿದೆ. ರಾಜ್ಯದ ತೆರಿಗೆ ಹಂಚಿಕೆಯಲ್ಲಿ ಕಳೆದ 10 ವರ್ಷದಲ್ಲಿ ಶೇ.258ರಷ್ಟು ಹೆಚ್ಚಳವಾಗಿದೆ. ಕೇಂದ್ರದ ಸಹಾಯಾನುದಾನದಲ್ಲಿ ಶೇ.273ರಷ್ಟು ಏರಿಕೆಯಾಗಿದೆ ಎಂದು ವಿವರಿಸಿದರು.

ರಾಜ್ಯದ ತೆರಿಗೆ ಹಂಚಿಕೆ 2004-14ರ ಅವಧಿಯಲ್ಲಿ ವಾರ್ಷಿಕ 81,795 ಕೋಟಿ ರೂ. ಇತ್ತು. ಅದೇ ಮೋದಿ ಸರ್ಕಾರದ ಅವಧಿಯಲ್ಲಿ 2014-2024ರ ಫೆಬ್ರವರಿವರೆಗೆ 2,93,226 ಕೋಟಿ ರೂ.ಗೆ ಏರಿಕೆಯಾಗಿದೆ. ಹೀಗಾಗಿ ಸುಳ್ಳು ಆರೋಪ ಮಾಡಬೇಡಿ. ಅಂಕಿಅಂಶ ಇಟ್ಟು ಮಾತನಾಡಿ. ಜನರ ದಾರಿ ತಪ್ಪಿಸುವುದು ಸರಿಯಲ್ಲ. ವಾಸ್ತವಾಂಶವನ್ನು ನೋಡಿ ಎಂದು ತಿರುಗೇಟು ಕೊಟ್ಟರು.

15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ 5,495 ಕೋಟಿ ರೂ ವಿಶೇಷ ಅನುದಾನದ ಶಿಫಾರಸು ಮಾಡಿದ್ದು, ಅದನ್ನು ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಪದೇ ಪದೆ ಆರೋಪಿಸುತ್ತಿದೆ. ಆದರೆ ಅದೊಂದು ಅಪ್ಪಟ ಸುಳ್ಳು ಆರೋಪ. ಆಯೋಗ ತನ್ನ ಅಂತಿಮ ವರದಿಯಲ್ಲಿ ಅಂಥ ಯಾವುದೇ ಶಿಫಾರಸು ಮಾಡಿಲ್ಲ. ನಾವು ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿದರೂ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುತ್ತಿದ್ದು, ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಕಿಡಿ ಕಾರಿದರು.