ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಗಲಭೆ ಎಬ್ಬಿಸುವ ಪ್ರಯತ್ನ ಮಾಡಬೇಡಿ. ನಮ್ಮ ಮಂಗಳೂರು ಶಾಂತವಾಗಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಅವರು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ವೀಡಿಯೋ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಯಿಸಿದ ಅವರು, ಹೆಚ್.ಡಿ. ಕುಮಾರಸ್ವಾಮಿ ಅವರು ವೀಡಿಯೋ ಬಿಡುಗಡೆ ಮಾಡಲಿ. ಆದರೆ ಸಿಡಿಯನ್ನು ಯಾವ ಕಾರ್ಯಕರ್ತರು ಅಥವಾ ಯಾವ ಪೊಲೀಸರು ನೀಡಿದರು ಎಂಬುವುದು ಪತ್ತೆ ಆಗಬೇಕು. ಈಗಾಗಲೇ ಪ್ರತಿಭಟನೆ ವೇಳೆ ಲಾರಿಯಲ್ಲಿ ಕಲ್ಲನ್ನು ತುಂಬಿಕೊಂಡು ಬಂದವರು ಯಾರು, ಪೆಟ್ರೋಲ್ ತಂದವರು ಯಾರು ಎಂದು ಗೊತ್ತಾಗಿದೆ. ಈ ಸತ್ಯಾಂಶವನ್ನು ತಿಳಿಸುವ ವೀಡಿಯೋವನ್ನು ಕುಮಾರಸ್ವಾಮಿ ಅವರು ಬಿಡುಗಡೆ ಮಾಡಲಿ. ಕುಮಾರಸ್ವಾಮಿ ಮತ್ತು ಜೆಡಿಎಸ್‍ನವರ ಅಸ್ಥಿತ್ವ ಮಂಗಳೂರಿನಲ್ಲಿ ಏನೂ ಇಲ್ಲ. ಹೀಗಾಗಿ ರಾಜ್ಯದಲ್ಲಿ ಗಲಭೆ ಸೃಷ್ಠಿಸುವ ಪ್ರಯತ್ನ ಮಾಡಬೇಡಿ. ಮಂಗಳೂರು ಶಾಂತವಾಗಿದೆ. ಕೇರಳದಿಂದ ಬಂದು ಉದ್ದೇಶಪೂರ್ವಕವಾಗಿ ಗಲಭೆ ಉಂಟು ಮಾಡಿದವರ ಪತ್ತೆಗೆ ಕುಮಾರಸ್ವಾಮಿ ಅವರು ಸಹಕಾರ ನೀಡಲಿ ಎಂದರು.










