ರಾತ್ರಿ ಊಟ ಬಡಿಸಲು ನಿರಾಕರಿಸಿದ್ದಕ್ಕೆ ಪತ್ನಿಯನ್ನ ಕೊಂದ ಪತಿ!

76
firstsuddi

ರಾಯ್ಪುರ್ : ರಾತ್ರಿ ಊಟ ನೀಡಲು ನಿರಾಕರಿಸಿದ ಹೆಂಡತಿಯನ್ನು ಗಂಡ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.

ಮಂಜೀತಾ ಶ್ರೀವಾಸ್ (32) ಮೃತ ಮಹಿಳೆ. ಈಕೆಯ ಪತಿ ಯೋಗೇಂದ್ರ ಶ್ರೀನಿವಾಸ್ (38) ಛತ್ತೀಸ್ಗಢದ ಕೊರ್ಬಾದ ಖಾಸಗಿ ಕ್ಲಿನಿಕ್ ನಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದ. ಯೋಗೇಂದ್ರ ರಾತ್ರಿ ಕೆಲಸ ಮುಗಿಸಿ ಹಿಂತಿರುಗಿ ಬಂದು, ಪುಸ್ತಕ ಓದುತ್ತಿದ್ದಾಗ ತನ್ನ ಪತ್ನಿಗೆ ಊಟ ಬಡಿಸುವಂತೆ ಹೇಳಿದ್ದ. ಆದರೆ, ಮಂಜೀತಾ ತನ್ನ ಗಂಡನಿಗೆ ಊಟ ಬಡಿಸಲು ನಿರಾಕರಿಸಿದ್ದಾಳೆ. ಇದಾದ ನಂತರ ದಂಪತಿಗಳ ನಡುವೆ ಜಗಳ ನಡೆದಿದೆ.

ಕೋಪದ ಭರದಲ್ಲಿ ಯೋಗೇಂದ್ರ ತನ್ನ ಹೆಂಡತಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ನಂತರ, ಅವರ 8 ವರ್ಷದ ಮಗ ಮತ್ತು 10 ವರ್ಷದ ಮಗಳು ತಮ್ಮ ತಾಯಿಯ ಕಿರುಚಾಟವನ್ನು ಕೇಳಿ, ಸ್ಥಳಕ್ಕೆ ಓಡಿಬಂದು ನೋಡಿದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ.

ತಾಯಿ ಕೊಲೆಯಾದ ಬಗ್ಗೆ ಮಕ್ಕಳು ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಯೋಗೇಂದ್ರನೇ ತಾನು ಹೆಂಡತಿಯನ್ನು ಕೊಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.