ಬೆಂಗಳೂರು : ರಾತ್ರಿ ಮಾಂಸ ತಿಂದು ಬೆಳಗ್ಗೆ ದೇವಸ್ಥಾನಕ್ಕೆ ಹೋಗಬಹುದಂತೆ. ಬೆಳಗ್ಗೆ ತಿಂದು ಸಂಜೆ ದೇವಸ್ಥಾನಕ್ಕೆ ಹೋಗಬಾರದಂತೆ. ಏನು ಮೌಢ್ಯ ಇದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಪ್ರಶ್ನಿಸಿದರು.
ನಗರದ ಗಾಂಧಿ ಭವನದಲ್ಲಿ ಸಮಾಜವಾದಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಶಾಂತವೇರಿ ಗೋಪಾಲಗೌಡ ಮತ್ತು ಮಧುಲಿಮಯೆ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ವೀಣಾ ಅಚ್ಚಯ್ಯ ಅವರ ಮನೆಗೆ ಹೋಗಿಲ್ಲ. ಅವರ ಮನೆಗೆ ಹೋಗಿ ನಾನ್ ವೆಜ್ ತಿಂದೆ ಎಂದು ಹೇಳ್ತಾರೆ. ನಾನು ಸುದರ್ಶನ ಗೆಸ್ಟ್ ಹೌಸ್ ನಲ್ಲಿ ಊಟ ಮಾಡಿದ್ದು. ನಾವು ಮೈಸೂರಿನಲ್ಲಿ ಚಾಮುಂಡೇಶ್ವರಿ ಹಬ್ಬ ಮಾಡ್ತೀವಿ. ಆಗ ಮರಿನೇ ಹೊಡೆಯೋದು. ನಾನು ಮಾಂಸ ತಿಂದು ದೇವಸ್ಥಾನಕ್ಕೆ ಹೋದೆ ಎನ್ನುವುದೇ ಹೆಡ್ ಲೈನ್ ರಾತ್ರಿ ಮಾಂಸ ತಿಂದು ಬೆಳಗ್ಗೆ ದೇವಸ್ಥಾನಕ್ಕೆ ಹೋಗಬಹುದಂತೆ. ಬೆಳಗ್ಗೆ ತಿಂದು ಸಂಜೆ ದೇವಸ್ಥಾನಕ್ಕೆ ಹೋಗಬಾರದಂತೆ. ಏನು ಮೌಢ್ಯ ಇದು ಎಂದರು.
ಗೋಪಾಲಗೌಡರರಿಂದ ಯುವಕರು ಪ್ರೇರಣೆ ಪಡೆದುಕೊಳ್ಳಬೇಕು. ಕರ್ನಾಟಕ ಏಕೀಕರಣಕ್ಕೆ ಸಾಕಷ್ಟು ಹೋರಾಟಗಳು ಆಗಿವೆ. ಶಾಂತವೇರಿ ಗೋಪಾಲಗೌಡರು ಸೇತುವೆ ಆಗಿ ಕೆಲಸ ಮಾಡಿದ್ದರು. ನಾವೆಲ್ಲರೂ ಮೊದಲು ಮನುಷ್ಯರಾಗಿ ಬದುಕಬೇಕು. ಆಮೇಲೆ ಜಾತಿ. ಕುವೆಂಪು ಹೇಳಿದ್ದಾರೆ. ಹುಟ್ಟಿದ್ದಾಗ ವಿಶ್ವಮಾನವ. ಬೆಳೆಯುತ್ತ ಅಲ್ಪಮಾನವ. ಜಾತಿಯಲ್ಲಿ ಮೇಲು ಕೀಳು ಅಂತಾ ಇದ್ದರೆ ನಾವು ಇನ್ನೂ ಗುಲಾಮಗಿರಿಯಲ್ಲಿ ಇದ್ದ ಹಾಗೆ ಎಂದರು.
ಕರ್ನಾಟಕ ರಾಜಕಾರಣ ಹೇಗೆ ಆಗುತ್ತಿದೆ ಎಂದು ನೀವೇ ನೋಡ್ತಿದೀರಲ್ಲ. ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಕೊಡಗಿನಲ್ಲಿ ನನ್ನ ಮೇಲೆ ಮೊಟ್ಟೆ ಎಸೆದವ ಆರ್ ಎಸ್ ಎಸ್ ಗಿರಾಕಿ. ಅವನಿಂದ ಕಾಂಗ್ರೆಸ್ ನವನು ಎಂದು ಹೇಳಿಸುತ್ತಾರೆ. ಅಪ್ಪಚ್ಚು ರಂಜನ್ ಆಪ್ತ ಸೆಲೆಬ್ರಿಟಿಗಳ ಜೊತೆ ಫೊಟೋ ತೆಗೆಯುತ್ತಾರೆ. ಸಂಪತ್ ಕೂಡ ಅಪ್ಪಚ್ಚು ರಂಜನ್ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ ಎಂದು ಹೇಳ್ತಾರೆ ಎಂದರು.
ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಒಬ್ಬ ಮೂರ್ಖ. ರಾಯಚೂರು ಜಿಲ್ಲೆ ತೆಲಂಗಾಣಗೆ ಸೇರಿಸುವ ಬಗ್ಗೆ ಮಾತನಾಡುತ್ತಾರೆ. ರಾಜಕೀಯ ಬೆಳೆ ಬೇಯಿಸಲು ಈ ರೀತಿ ಹೇಳುತ್ತಾರೆ. ಕರ್ನಾಟಕದ ಮಂತ್ರಿ ಉಮೇಶ್ ಕತ್ತಿ ಕೂಡ ಪ್ರತೇಕ ರಾಜ್ಯ ಬೇಕು ಅಂತಾ ಹೇಳ್ತಾರೆ. ಕತ್ತಿ ಮಂತ್ರಿಯಾಗಿದವನು ಇಷ್ಟು ವರ್ಷ ಏನ ಕಡ್ದು ಗುಡ್ಡೆ ಹಾಕಿದ್ದಾರೆ?, ಇಲ್ಲಿವರೆಗೆ ಉತ್ತರ ಕರ್ನಾಟಕಕ್ಕೆ ಉಮೇಶ್ ಕತ್ತಿ ಕೊಡುಗೆ ಏನು? ಕೇವಲ ರಾಜಕೀಯಕ್ಕಾಗಿ ಇಂತಹ ಹೇಳಿಕೆ ಕೊಡ್ತಿದ್ದಾರೆ ಎಂದು ಹೇಳಿದರು.










