ರಾಮನಗರ : ನೇಣು ಬಿಗಿದ ಸ್ಥಿತಿಯಲ್ಲಿ ಪತಿ-ಪತ್ನಿ ಮೃತದೇಹ ಪತ್ತೆಯಾಗಿರುವ ಘಟನೆ ಜಿಲ್ಲೆ ಮಾಗಡಿ ಪಟ್ಟಣದ ತಿರುಮಲೆ ಭಜನೆ ಮನೆ ರಸ್ತೆಯಲ್ಲಿ ನಡೆದಿದೆ.
ನರಸಿಂಹಮೂರ್ತಿ ನಾಯ್ಕ (40), ಪತ್ನಿ ಹೇಮ (35) ನೇಣಿಗೆ ಶರಣಾದವರು. ಇವರಿಬ್ಬರು ಬೇರೆ ಬೇರೆ ಮದುವೆಯಾಗಿದ್ದರು, ಆದರೆ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದರು. ಕಳೆದ ಕೆಲ ತಿಂಗಳಿಂದ ಅವರಿಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ ನಿನ್ನೆ ಇಬ್ಬರು ಒಂದೇ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಇದೀಗ ಸಾವಿನ ಸುತ್ತ, ಹಲವು ಅನುಮಾನಗಳು ಹುಟ್ಟಿಕೊಂಡಿದೆ.
ಮೃತ ನರಸಿಂಹಮೂರ್ತಿಗೆ ಈಗಾಗಲೇ ಮದುವೆಯಾಗಿ ಒಂಬತ್ತು ವರ್ಷದ ಮಗು ಸಹ ಇದೆ. ಅಲ್ಲದೆ ಮೃತ ಹೇಮಾ ಸಹ ಈಗಾಗಲೇ ಏಳು ವರ್ಷದ ಹಿಂದೆ ವಿವಾಹವಾಗಿ ಎರಡು ವರ್ಷಗಳ ಕಾಲ ಗಂಡನ ಜೊತೆ ಸಂಸಾರ ಮಾಡಿ, ಗಂಡನನ್ನು ಬಿಟ್ಟು ತುಮಕೂರಿನಿಂದ ಮಾಗಡಿಗೆ ಬಂದು ನೆಲೆಸಿದ್ದಳು. ಈ ವೇಳೆ ನರಸಿಂಹಮೂರ್ತಿ ಪರಿಚಯವಾಗಿ ಇಬ್ಬರು ಸಹ ಕಳೆದ ಐದು ವರ್ಷದಿಂದ ಮದುವೆಯಾಗದೇ ಜೊತೆಗೆ ಸಂಸಾರ ಮಾಡಿಕೊಂಡು ಹೋಗುತ್ತಿದ್ದರು. ಎರಡು ವರ್ಷದ ಕೆಳಗೆ ಮಾಗಡಿ ಪಟ್ಟಣದ ತಿರುಮಲೆ ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಇಬ್ಬರನ್ನು ಗಂಡ ಹೆಂಡತಿ ಎಂದು ಅಕ್ಕಪಕ್ಕದ ಮನೆಯವರು ಅಂದುಕೊಂಡಿದ್ದರು.
ಇಬ್ಬರ ನಡುವೆ ಕಳೆದ ನಾಲ್ಕು ತಿಂಗಳಿಂದ ಸಾಕಷ್ಟು ಗಲಾಟೆ ನಡೆಯುತ್ತಿತ್ತಂತೆ. ನಿನ್ನೆ ಸಹ ಇಬ್ಬರ ನಡುವೆ ಗಲಾಟೆ ನಡೆದಿದೆ. ಹೀಗಾಗಿ ಹೇಮಾಳನ್ನು ನರಸಿಂಹ ಮೂರ್ತಿ ನೇಣು ಹಾಕಿ, ಆನಂತರ ತಾನು ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ವಿಷಯ ತಿಳಿದ ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










