ಚಿಕ್ಕಮಗಳೂರು :ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರು ಇಸ್ಲಾಂ ಧರ್ಮದ ಕುರಿತು ನೀಡಿರುವ ಹೇಳಿಕೆಗೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ರಂಭಾಪುರಿ ಮಠದ ವೀರ ಸೋಮೇಶ್ವರ ಜಗದ್ಗುರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜ್ಞಾವಂತ ಹಾಗೂ ಉನ್ನತ ಶಿಕ್ಷಣ ಸಚಿವರು ಯಾವುದೇ ವಿಚಾರದ ಕುರಿತು ಮಾತನಾಡುವಾಗ ಸಂಯಮ ಹಾಗೂ ಜವಾಬ್ದಾರಿಯಿಂದ ಮಾತನಾಡಬೇಕು. ಯಾವುದೇ ಧರ್ಮವನ್ನು ಗೌರವಿಸುವುದು ತಪ್ಪಲ್ಲ. ಆದರೆ ಒಂದು ಧರ್ಮವನ್ನು ಮತ್ತೊಂದು ಧರ್ಮಕ್ಕೆ ಹೋಲಿಕೆ ಮಾಡುವುದು ಭಾವನಾತ್ಮಕ ಗೊಂದಲಕ್ಕೆ ಕಾರಣವಾಗಬಹುದು ಎಂದು ಶ್ರೀಗಳು ಹೇಳಿದರು.
ಭಾರತದ ವೈಶಿಷ್ಟ್ಯವೇ ಸರ್ವಧರ್ಮ ಸಮಭಾವ. ಯಾವುದೇ ಧರ್ಮವನ್ನು ಮೇಲು-ಕೀಳು ಎಂದು ಪರಿಗಣಿಸದೆ ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುವ ನಿಲುವು ಇರಬೇಕು. ಧರ್ಮಗಳ ನಡುವೆ ಸಂಘರ್ಷಕ್ಕಿಂತ ಸಂವಾದ ಮತ್ತು ಸಮುದಾಯಗಳ ನಡುವೆ ಪರಸ್ಪರ ಗೌರವ ಮುಖ್ಯವಾಗಿದೆ ಎಂದರು.
ಹಿಂದೂ ಧರ್ಮದ ಬಗ್ಗೆ ಮಾತನಾಡುವಾಗ ಅದರ ಪ್ರಾಚೀನತೆ, ಶ್ರೀಮಂತಿಕೆ ಹಾಗೂ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಮಾತನಾಡಬೇಕು. ಸಚಿವ ಬಸವರಾಜ್ ರಾಯರೆಡ್ಡಿ ಅವರು ವಿದ್ಯಾರ್ಥಿಗಳು ಹಾಗೂ ಸಮಾಜಕ್ಕೆ ಮಾರ್ಗದರ್ಶನ ನೀಡುವ ಸ್ಥಾನದಲ್ಲಿದ್ದಾರೆ. ಹೀಗಾಗಿ ಅವರ ಹೇಳಿಕೆಗಳು ಸಮಾಜದಲ್ಲಿ ಏಕತೆ, ಶಾಂತಿ ಮತ್ತು ಪರಸ್ಪರ ಗೌರವ ಮೂಡಿಸುವಂತಿರಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಜ್ಞಾವಂತ ಸಚಿವರಿಂದ ವಿಭಜನೆಯ ಮಾತುಗಳು ಬರುವುದು ಸರಿಯಲ್ಲ. ಸಚಿವರು ತಮ್ಮ ಹೇಳಿಕೆಯ ಕುರಿತು ಮತ್ತಷ್ಟು ಸ್ಪಷ್ಟವಾದ ವಿವರಣೆ ನೀಡಬೇಕು ಎಂದು ರಂಭಾಪುರಿ ಶ್ರೀಗಳು ಒತ್ತಾಯಿಸಿದರು.










