ನವದೆಹಲಿ : ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ ಯಶವಂತ್ ಸಿನ್ಹಾ ಟಿಎಂಸಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಪ್ರತಿಪಕ್ಷಗಳ ಒಗ್ಗಟ್ಟಿನ ಸಲುವಾಗಿ ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡುವ ಉದ್ದೇಶದಿಂದ ತಾವು ಪಕ್ಷ ತೊರೆಯುತ್ತಿರುವುದಾಗಿ ಯಶವಂತ್ ಸಿನ್ಹಾ ತಿಳಿಸಿದ್ದರು.
ನನಗೆ ಸಿಕ್ಕ ಗೌರವ ಹಾಗೂ ಪಕ್ಷದಲ್ಲಿ ತೋರಿದ ಘನತೆಗಳಿಗೆ ನಾನು ಮಮತಾ ಬ್ಯಾನರ್ಜಿ ಅವರಿಗೆ ಆಭಾರಿಯಾಗಿದ್ದೇನೆ. ಈಗ ಇನ್ನೂ ಹೆಚ್ಚಿನ ರಾಷ್ಟ್ರಕಾರಣಕ್ಕೆ ಸಮಯ ಬಂದಿದೆ. ವಿಪಕ್ಷಗಳ ಒಗ್ಗಟ್ಟಿಗಾಗಿ ಕೆಲಸ ಮಾಡಲು ನಾನು ಪಕ್ಷ ತೊರೆಯುತ್ತಿದ್ದೇನೆ. ಈ ನಡೆಯನ್ನು ಮಮತಾ ಬ್ಯಾನರ್ಜಿ ಅನುಮೋದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿನ್ಹಾ ಟ್ವೀಟ್ ಮೂಲಕ ತಿಳಿಸಿದ್ದಾರೆ.










