ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ದುರಂತ – ಆರು ಮಂದಿ ಸಾವು…

57
firstsuddi

ಏಲೂರು(ಆಂಧ್ರಪ್ರದೇಶ) : ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಮಾಸುನೂರು ವಲಯದ ಅಕ್ಕಿರೆಡ್ಡಿಗುಡೆಂನಲ್ಲಿರುವ ಪೋರಸ್ ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿ ಆರು ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ.

ನಿನ್ನೆ ಮಧ್ಯರಾತ್ರಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ನೂಜಿವೀಡು ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರಲ್ಲಿ ಬಹುತೇಕರ ಪರಿಸ್ಥಿತಿ ಗಂಭೀರವಾಗಿದ್ದು, ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.

ಅಗ್ನಿ ಅವಘಡ ಸಂಭವಿಸುವ ವೇಳೆ 150 ಮಂದಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ದೊರಕಿದ್ದು, ಅದೃಷ್ಟವಶಾತ್ ಸಾಕಷ್ಟು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಏಲೂರು ಎಸ್ಪಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಬಗ್ಗೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೇ ಗಂಭೀರ ಗಾಯಗೊಂಡವರಿಗೆ ತಲಾ 5 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಳುಗಳಿಗೆ 2ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.