ಹಾಸನ : ಮತದಾನ ಮಾಡಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ನಾನು 1954 ರಿಂದ ತಾಲ್ಲೂಕು ಬೋರ್ಡ್ ಸದಸ್ಯನಾಗಿ ರಾಜಕೀಯ ಶುರುಮಾಡಿ ಇಂದಿನ ವರೆಗೆ ಜನಸೇವೆ ಮಾಡುತ್ತಿದ್ದೇನೆ. ಸಣ್ಣ ಹಂತದ ಸೇವೆ ಮಾಡುತ್ತಾ ಓಡಾಡಿಕೊಂಡಿದ್ದೆ. ನಾನು ಹಾಗೂ ನನ್ನ ಪತ್ನಿ ಮೊಮ್ಮಗ ಪ್ರಜ್ವಲ್ ಅವರಿಗೆ ಮತ ಹಾಕಿದ್ದೇವೆ. ನನ್ನ ಪುತ್ರ ರೇವಣ್ಣ ಅವರಿಗೆ 1994 ರಿಂದ ಮತ ಚಲಾಯಿಸಿದ್ದೇನೆ, ಆದರೆ ಇಂದು ಮೊಮ್ಮಗನಿಗೆ ಓಟ್ ಹಾಕಿದ್ದೇನೆ. ಅನೇಕರು ನಮ್ಮ ವಂಶದ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಆದರೆ ನಾವು ರೈತರ ಮಕ್ಕಳು, ದೇವರಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ದೈವಕೃಪೆ ಹಾಗೂ ಮತದಾರರ ಆಶೀರ್ವಾದದಿಂದ ನಾವು ಹಂತ ಹಂತವಾಗಿ ಬೆಳೆದು ಬಂದಿದ್ದೇವೆ. ನಾವೆಲ್ಲರೂ ನಮ್ಮ ಕೈಲಾದಮಟ್ಟಿಗೆ ಮತದಾರರ ಸೇವೆ ಮಾಡಿದ್ದೇವೆ. ಪ್ರಜ್ವಲ್ ರೇವಣ್ಣ ಅವರು ಇಂಜಿನಿಯರಿಂಗ್ ಪದವೀಧರ, ಆದರೂ ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿ ಮಾಡಿದ್ದೇವೆ. ಬಹುಶಃ ಯಾವುದೇ ಆತಂಕ ಇಲ್ಲದೇ ಪ್ರಜ್ವಲ್ ರೇವಣ್ಣ ಅವರು ಜಯಶಾಲಿಯಾಗುತ್ತಾರೆ.
ಮಂಡ್ಯದಲ್ಲೂ ನಿಖಿಲ್ ಅವರಿಗೆ ಯಾವುದೇ ತೊಂದರೆ ಇಲ್ಲ ಅವರೂ ಗೆಲ್ಲುತ್ತಾರೆ. ತುಮಕೂರಿನಲ್ಲಿ ನಾನು ಕೂಡಾ ಚುನಾವಣೆಯಲ್ಲಿ ನಿಂತಿದ್ದೇನೆ, ಇದೆಲ್ಲಾ ದೇವರ ಆಟ. ಕಾಂಗ್ರೆಸ್ ಪಕ್ಷ ಹಾಗೂ ನಾವು ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ನಾಳೆ ರಾಹುಲ್ ಗಾಂಧಿ ಅವರ ಜೊತೆ ರಾಯಚೂರಿನಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗುತ್ತೇನೆ. ಮೊದಲ ಹಂತದ 14 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನದಲ್ಲಿ ನಾವು 10 ಸ್ಥಾನದಲ್ಲಿ ಗೆಲ್ಲುವ ವಿಶ್ವಾಸ ಇದೆ. ಹಾಸನ,ಮಂಡ್ಯ,ತುಮಕೂರು,ಚಿಕ್ಕಬಳ್ಳಾಪುರ,ಮೈಸೂರು ಹಾಗೂ ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು ನಿಶ್ಚಿತ. 2 ನೇ ಹಂತದ ಕ್ಷೇತ್ರಗಳಲ್ಲೂ ರಾಹುಲ್ ಗಾಂಧಿ ಹಾಗೂ ಕೈ ನಾಯಕರ ಜೊತೆ ಜಂಟಿ ಪ್ರಚಾರ ಮಾಡುತ್ತೇನೆ. ರಾಜ್ಯ ಸರ್ಕಾರ 20% ಸರ್ಕಾರ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪ್ರತಿಕ್ರಯಿಸಿದ ಹೆಚ್.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಯವರು ಹಾಗೆಲ್ಲಾ ಮಾತನಾಡಬಾರದು. ದೊಡ್ಡ ಸ್ಥಾನದಲ್ಲಿರುವವರು ಲಘುವಾಗಿ ಮಾತನಾಡುವುದನ್ನು ಬಿಟ್ಟರೆ ಅವರಿಗೂ ಹೆಚ್ಚಿನ ಗೌರವ ದೊರಕಲಿದೆ. ರಫೇಲ್ ಹಗರಣದಲ್ಲಿ 3 ಸಾವಿರ ಕೋಟಿ ಹಗರಣ ನಡೆದಿದೆ ಎಂಬ ಆರೋಪ ಅವರ ಮೇಲಿದೆ. 5 ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ ಭರವಸೆಯನ್ನು ನೀಡಿದ್ದರು ಅದು ಏನಾಯಿತು? ಈ ಎಲ್ಲಾ ಕಾರಣಗಳಿಂದ ಮೋದಿ ಸ್ಪಷ್ಟ ಬಹುಮತ ಪಡೆಯುವುದಿಲ್ಲ. ಹಾಗಾದರೆ ಉಳಿದ ಪಕ್ಷಗಳು ಮೆಜಾರಿಟಿ ಪಡೆಯುತ್ತೇವೆ ಎಂದು ಹೇಳುವುದಿಲ್ಲ. ಬಹುಶಃ ಅತಂತ್ರದ ಲೋಕಸಭೆ ನಿರ್ಮಾಣವಾಗಬಹುದು. ಅಂತಿಮವಾಗಿ ಜಾತ್ಯಾತೀತ ಪಕ್ಷಗಳು ಅಧಿಕಾರ ಹಿಡಿಯಬಹುದು. ಇವೆಲ್ಲದಕ್ಕೂ ಮೇ 23 ರ ನಂತರ ಒಂದು ರೂಪ ಬರಲಿದೆ. ಒಂದು ವೇಳೆ ಮಹಾಘಟ ಬಂಧನ್ ಸರ್ಕಾರ ಮಾಡುವ ಸಂದರ್ಭ ಬಂದರೆ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲು ನಾನು ಬೆಂಬಲ ನೀಡುತ್ತೇನೆ. ಬೇರೆಯವರನ್ನೂ ಒಟ್ಟುಗೂಡಿಸುವ ಪ್ರಯತ್ನವನ್ನೂ ಕೂಡಾ ಮಾಡುತ್ತೇವೆ ಎಂದು ಹೇಳಿದ್ದಾರೆ.










