ರೇಪ್ ಆಗಿರೋದು ಮೈಸೂರಲ್ಲಿ, ಆದ್ರೆ ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಪ್ರಯತ್ನಿಸುತ್ತಿದ್ದಾರೆ : ಆರಗ ಜ್ಞಾನೇಂದ್ರ.

88
firstsuddi

ಬೆಂಗಳೂರು : ಅತ್ಯಾಚಾರ ಆಗಿರೋದು ಮೈಸೂರಿನಲ್ಲಿ, ಆದರೆ ಕಾಂಗ್ರೆಸ್ ನವರು ನನ್ನನ್ನೇ ರೇಪ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ವಿಚಾರದಲ್ಲಿ ಹೀಗೆ ಮಾಡುವುದಕ್ಕೆ ಹೋಗಬಾರದು. ಈ ಪ್ರಕರಣದಲ್ಲೂ ರಾಜಕೀಯ ಮಾಡಲು ಹೋಗಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಕಾಂಗ್ರೆಸ್ ನಿಂದ ಗೃಹ ಸಚಿವರ ರಾಜೀನಾಮೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅತ್ಯಾಚಾರ ಆಗಿರೋದು ಮೈಸೂರಿನಲ್ಲಿ. ಆದರೆ ಕಾಂಗ್ರೆಸ್ ನವರು ನನ್ನನ್ನೇ ರೇಪ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಯುವಕ, ಯುವತಿ 7.30 ಕ್ಕೆ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಷ್ಟೊತ್ತಿಗೆ ಅಲ್ಲಿ ಹೋಗಬಾರದಿತ್ತು. ಆದರೆ ಹೋಗಬೇಡಿ ಅಂತಾ ತಡೆಯೋದಕ್ಕೂ ಆಗೋದಿಲ್ಲ. ಸದ್ಯಕ್ಕೆ ಯುವಕ, ಯುವತಿ ಶಾಕ್ ನಲ್ಲಿ ಇದ್ದಾರೆ. ಅವರ ಸಂಪೂರ್ಣ ಹೇಳಿಕೆ ಪಡೆಯಲು ಆಗಿಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಗೃಹ ಸಚಿವರ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಚಿವರ ಈ ಹೇಳಿಕೆ ಮಹಿಳೆಯರು ಸೇರಿದಂತೆ ವಿವಿಧ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವರು ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ. ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕೆಂದು ಕೆಲ ಸಂಘಟನೆಗಳು ಒತ್ತಾಯಿಸಿವೆ.