ತಿರುವನಂತಪುರಂ : ಚಲಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ಘಟನೆ ಕೇರಳದಲ್ಲಿ ನಡೆದಿದೆ. ಅಲಪ್ಪುಳ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲು ಕೋಝಿಕ್ಕೋಡ್ ನಗರವನ್ನು ದಾಟಿ ಕೇರಳದ ಕೊರಾಪುಳ ರೈಲ್ವೆ ಸೇತುವೆಯನ್ನು ತಲುಪಿತ್ತು. ಈ ವೇಳೆ ಅನಾಮಿಕನೊಬ್ಬ ಸಹ ಪ್ರಯಾಣಿಕನೊಂದಿಗೆ ಜಗಳವಾಡಿ, ನಂತರ ಆತನಿಗೆ ಬೆಂಕಿ ಹಚ್ಚಿದ್ದಾನೆ.
ಕಾಲ್ತುಳಿತ ಮತ್ತು ಸುಟ್ಟ ಗಾಯಗಳಿಂದ 3 ಮಂದಿ ಸಾವನ್ನಪ್ಪಿದ್ದಾರೆ ಮತ್ತು 9 ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಮಹಿಳೆ ಮತ್ತು ಮಗು ಕೂಡ ಸೇರಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬೆಂಕಿ ಹಚ್ಚಿದ್ದ ವ್ಯಕ್ತಿ ರೈಲಿನ ಚೈನ್ ಎಳೆದು ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ಪ್ರಯಾಣಿಕರು ರೈಲ್ವೆ ರಕ್ಷಣಾ ಪಡೆಗೆ (ಆರ್‌ಪಿಎಫ್) ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಮಹಿಳೆ ಹಾಗೂ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಹಿಳೆ, ಮಗು ಹಾಗೂ ಓರ್ವ ವ್ಯಕ್ತಿಯ ಮೃತದೇಹಗಳು ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಆರೋಪಿ ಇನ್ನೂ ಪತ್ತೆ ಆಗಿಲ್ಲ. ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.










