ಲಸಿಕೆ ವಿತರಣೆಯಲ್ಲಿ ಕನ್ನಡಿಗರಿಗೆ ತಾರತಮ್ಯವಾಗುತ್ತಿದೆ – ಹೆಚ್.ಡಿ.ಕುಮಾರಸ್ವಾಮಿ.

104
firstsuddi

ಬೆಂಗಳೂರು : ಲಸಿಕೆ ನೀಡಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ಕನ್ನಡಿಗರಿಗೆ ತಾರತಮ್ಯವಾಗುತ್ತಿದೆ ಎಂದು ಟ್ವೀಟ್ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಮತ್ತು ಕನ್ನಡಿಗರಿಗೆ ತಾರತಮ್ಯವಾಗುತ್ತಿರುವುದು, ಗುಜರಾತ್ ಮೇಲೆ ಅತಿಯಾದ ಪ್ರೀತಿ ತೋರುತ್ತಿರುವುದು ಕೇಂದ್ರದ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳಿಂದಲೇ ಬಹಿರಂಗವಾಗಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಕೇಂದ್ರದಿಂದ ಆಗುತ್ತಿರುವ ಈ ತಾರತಮ್ಯ ಮನುಷ್ಯತ್ವ ವಿರೋಧಿ. ರಾಜ್ಯದ ಬಿಜೆಪಿ ಸರ್ಕಾರ ಹಾಗೂ ಸಂಸದರು ಮೊದಲು ಈ ತಾರತಮ್ಯದ ವಿರುದ್ಧ ಹೋರಾಡಬೇಕು. ಜನರ ಜೀವ ಉಳಿಸಲು ಬೇಕಾಗಿರುವುದನ್ನು ಕೇಂದ್ರದಿಂದ ಕೇಳಿ ಪಡೆದುಕೊಳ್ಳಬೇಕಾದದ್ದು ಈ ಹೊತ್ತಿನ ಅಗತ್ಯವಾಗಿದೆ. ಲಸಿಕೆ ಅಭಿಯಾನದಲ್ಲಿ ಆಗುತ್ತಿರುವ ಈ ತಾರತಮ್ಯ, ವೈಫಲ್ಯಗಳನ್ನು ರಾಜ್ಯದ ಜನರೂ ಪ್ರಶ್ನೆ ಮಾಡಬೇಕಾಗಿದೆ. ಇಲ್ಲವಾದಲ್ಲಿ ಅಪಾಯದ ದಿನಗಳು ಮುಂದಿವೆ’ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

18-44 ವಯೋಮಾನದವರಿಗೆ ಲಸಿಕೆ ಹಾಕುವ ಅಭಿಯಾನ ಮೇ 1ರಿಂದ ಆರಂಭವಾಗಿದೆ. ದೇಶದಲ್ಲಿ ಮಂಗಳವಾರದ ಹೊತ್ತಿಗೆ 6 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ಗುಜರಾತ್‌ನಲ್ಲಿ 1,61,000 ಜನರಿಗೆ ಲಸಿಕೆ ಹಾಕಲಾಗಿದ್ದರೆ, ಕರ್ನಾಟಕದಲ್ಲಿ ಕೇವಲ 3475 ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಇದು ಕೇಂದ್ರದ ತಾರತಮ್ಯವೋ ಅಥವಾ ರಾಜ್ಯದ ವೈಫಲ್ಯವೋ ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯಕ್ಕೆ ಕೇಂದ್ರ ಸರ್ಕಾರ ಲಸಿಕೆ ನೀಡುತ್ತಿಲ್ಲವೇ? ರಾಜ್ಯಕ್ಕೆ ಏನು ಬೇಕೋ ಅದನ್ನು ಕೇಳಿ ಪಡೆಯಲು ರಾಜ್ಯ ಸರ್ಕಾರಕ್ಕೆ ಶಕ್ತಿ ಇಲ್ಲವೇ? ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಪ್ರಶ್ನಿಸಲು ನಮ್ಮವರಿಗೆ ಬಾಯಿಲ್ಲವೇ? ಇದೆಲ್ಲ ಗಮನಿಸುತ್ತಿದ್ದರೆ, ಕನ್ನಡರಿಗರನ್ನು ಈ ಸರ್ಕಾರಗಳು ಹಣೆಬರಹಕ್ಕೆ ಬಿಟ್ಟಂತೆ ಕಾಣುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.