ಕನ್ನಡ ಚಿತ್ರರಂಗದ ಹಿರಿಯ ನಟಿ, ‘ಅನುಭವ’ ಸಿನಿಮಾ ಖ್ಯಾತಿಯ ಅಭಿನಯ ಅವರಿಗೆ ಹೈಕೋರ್ಟ್ ಏಕಸದಸ್ಯ ಪೀಠವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ನಟಿ ಅಭಿನಯ ಸಹೋದರ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮಿದೇವಿ ಅವರಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ವರದಕ್ಷಿಣೆ ಕಿರುಕುಳ ಕೇಸಲ್ಲಿ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. ಅಭಿನಯ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ 2002 ರಲ್ಲಿ ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಭಿನಯ ಸೇರಿದಂತೆ ಐವರ ಮೇಲೆ ಕೇಸ್ ದಾಖಲಾಗಿತ್ತು.
ಹಣದ ಬೇಡಿಕೆ ಇಟ್ಟಿದ್ದ ಅಭಿನಯ ಕುಟುಂಬವು ಲಕ್ಷ್ಮೀದೇವಿಗೆ ಕಿರುಕುಳ ನೀಡಿ ತವರು ಮನೆಗೆ ಕಳುಹಿಸಿದ್ದರು. ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಲಕ್ಷ್ಮಿದೇವಿ ದೂರು ನೀಡಿದ್ದರು. ಚಂದ್ರಾಲೇಔಟ್ ಪೊಲೀಸರ ಚಾರ್ಜ್ ಶೀಟ್ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಐವರು ಆರೋಪಿಗಳಿಗೆ 2012ರಲ್ಲಿ ತಲಾ 2 ವರ್ಷ ಶಿಕ್ಷೆ ಪ್ರಕಟ ಮಾಡಿತ್ತು. ನಂತರ ಜಿಲ್ಲಾ ನ್ಯಾಯಾಲಯ ಐವರೂ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು.
ಜಿಲ್ಲಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಲಕ್ಷ್ಮೀದೇವಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಪ್ರಕರಣದಲ್ಲಿ ಶ್ರೀನಿವಾಸ್, ರಾಮಕೃಷ್ಣ, ಸಾವನ್ನಪ್ಪಿದ್ದು, ಅಭಿನಯ, ಚಲುವರಾಜ್, ಜಯಮ್ಮ ಎಂಬುವವರಿಗೆ ಹೈಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ನೀಡಿ ಆದೇಶಿಸಿದೆ.










