ಲಕ್ನೋ : ವಾರಣಾಸಿಯ ಜ್ಞಾನವಾಪಿ ಮಸೀದಿಯ ಸರ್ವೇ ಕಾರ್ಯ ಆರಂಭವಾಗಿದೆ. ಜ್ಞಾನವಾಪಿ ಮಸೀದಿಯ ವಿಡಿಯೋಗ್ರಾಫಿ ಸಮೀಕ್ಷೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದ್ದು, ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿದೆ. ಜ್ಞಾನವಾಪಿ ಮಸೀದಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಮೀಕ್ಷೆಗಾಗಿ ಸ್ಥಳೀಯ ನ್ಯಾಯಾಲಯ ಹೆಚ್ಚುವರಿಯಾಗಿ ಇಬ್ಬರು ಆಯುಕ್ತರನ್ನು ನೇಮಿಸಿದೆ. ನ್ಯಾಯಾಲಯ ನಿಯೋಜಿಸಿರುವ ಆಯುಕ್ತರೊಂದಿಗೆ ಸಮೀಕ್ಷೆಯ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಜ್ಞಾನವಾಪಿ ಮಸೀದಿಯೊಳಗೆ ಗಂಗಾ, ಹನುಮಾನ್, ಶ್ರೀಗೌರಿ-ಶಂಕರ, ಗಣೇಶ, ಶ್ರೀದೇವಿ ಶೃಂಗಾರ ಗೌರಿ ದೇವತೆಗಳು ಕಾಣಿಸಿವೆ ಎನ್ನಲಾಗ್ತಿದೆ. ಈ ಹಿನ್ನೆಲೆ ಮಸೀದಿಯೊಳಗೆ ದೇವತೆಗಳ ದರ್ಶನ, ಪೂಜೆ ಮಾಡಲು ಅವಕಾಶ ನೀಡುವಂತೆ ಕೋರಿ ಐವರು ಹಿಂದೂ ಮಹಿಳೆಯರು ನ್ಯಾಯಾಲಯಕ್ಕೆ 18 ಆಗಸ್ಟ್ 2021 ರಂದು ಅರ್ಜಿ ಸಲ್ಲಿಸಿದ್ದರು.
ವಾರಣಾಸಿಯ ಸಿವಿಲ್ ನ್ಯಾಯಾಲಯವು ಏ.26ರಂದು ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪರಿಶೀಲನೆ ನಡೆಸಲು ಮತ್ತು ಚಿತ್ರೀಕರಣಕ್ಕೆ ಆದೇಶಿಸಿತ್ತು. ಆದರೆ, ಜ್ಞಾನವಾಪಿ ಮಸೀದಿಯ ಆಡಳಿತ ಮಂಡಳಿಯು ನ್ಯಾಯಾಲಯದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.
ಮೇ 12 ರಂದು ಆಕ್ಷೇಪಣಾ ಅರ್ಜಿಗಳನ್ನು ವಿಚಾರಣೆ ನಡೆಸಿದ ವಾರಣಾಸಿ ಕೋರ್ಟ್ ಮಸೀದಿಯ ಸರ್ವೇ ಕಾರ್ಯವನ್ನು ಮುಂದುವರಿಸಿ, ಮೇ 17 ರೊಳಗೆ ವರದಿ ನೀಡಬೇಕು. ಅಲ್ಲದೇ, ಸರ್ವೇ ಕಾರ್ಯಕ್ಕಾಗಿ ಹೆಚ್ಚುವರಿ ಕಮಿಷನರ್ರನ್ನು ನಿಯೋಜಿಸಿ ಆದೇಶ ಹೊರಡಿಸಿತ್ತು.










