ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಕೇಸ್ ; ಶಾಸಕ ಗೌರಿಶಂಕರ್ ಗೆ ಎದುರಾಯ್ತು ಸಂಕಷ್ಟ!

106
firstsuddi

ತುಮಕೂರು : ನಕಲಿ ವಿಮಾ ಬಾಂಡ್ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಗೆ ಸಂಕಷ್ಟ ಎದುರಾಗಿದ್ದು, ಅಕ್ಟೋಬರ್ 22 ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗೌರಿಶಂಕರ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.

2018 ನಡೆದಿದ್ದ ವಿಧಾನಸಭೆ ಉಪಚುನಾವಣೆ ವೇಳೆ, ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ. ಸಿ. ಗೌರಿಶಂಕರ್ ಕ್ಷೇತ್ರದಲ್ಲಿನ 50 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನಕಲಿ ವಿಮೆಯ ಬಾಂಡ್ ಗಳನ್ನು ನೀಡಿದ್ದರು ಎಂದು ಮಾಜಿ ಶಾಸಕ ಸುರೇಶಗೌಡ ಅವರ ಸಹೋದರ ರಮೇಶ್ ಎಂಬುವರು ಈ ಕುರಿತಂತೆ ಪ್ರಧಾನ ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಲಿಖಿತವಾಗಿ ದೂರು ಸಲ್ಲಿಸಿದ್ದರು.

ರಮೇಶ್ ಅವರ ಆರೋಪದ ಅನ್ವಯ 2020ರ ಜುಲೈ 18ರಂದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಸಕ ಗೌರಿಶಂಕರ್ ವಿರುದ್ಧ ಎಫ್ಐಆರ್ ಕೂಡ ದಾಖಲು ಮಾಡಲಾಗಿತ್ತು. ಇದನ್ನು ರದ್ದುಪಡಿಸುವಂತೆ ಶಾಸಕ ಗೌರಿಶಂಕರ್ ಹೈಕೋರ್ಟ್ ಗೆ ಮನವಿ ಮಾಡಿದ್ದರು. ಇವರ ಅರ್ಜಿಯನ್ನ ನ್ಯಾಯಾಲಯ ತಿರಸ್ಕಾರ ಮಾಡಿತ್ತು.

16,386 ವಿದ್ಯಾರ್ಥಿಗಳಿಗೆ ನಕಲಿ ಆರೋಗ್ಯ ವಿಮೆಯ ಬಾಂಡ್ ಹಂಚಿಕೆ ಮಾಡಲಾಗಿದೆ. ವಿಮಾ ಕಾರ್ಡ್ ಜೊತೆಗೆ ಜೆಡಿಎಸ್ ನಾಯಕರ ಪೋಟೋ ಇರುವ ದಾಖಲೆಗಳ ಹಂಚಲಾಗಿದೆ. ತನಿಖೆಯ ವೇಳೆ ಅಕ್ರಮ ಎಸಗಿರುವುದು ಪತ್ತೆಯಾಗಿದೆ ಎಂದು ಸಿಐಡಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು. ಅಲ್ಲದೇ ಪ್ರಕರಣದ ವಿಚಾರಣೆ ನಡೆಸಿದ ಸಿಐಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು.