ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ : ಪಿಆರ್​ಒ ವಜಾಗೊಳಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ…

58
firstsuddi

ಉಡುಪಿ : ಇಲ್ಲಿನ ಖಾಸಗಿ ಕಾಲೇಜೊಂದರ ಸಾರ್ವಜನಿಕ ಸಂಪರ್ಕಾಧಿಕಾರಿ(ಪಿಆರ್​ಒ)ಯೋರ್ವರು ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾರೆಂದು ಆರೋಪಿಸಿ ಇಂದು ಕಾಲೇಜು ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲರು ನಿಮ್ಮ ಮನವಿಯನ್ನು ಕೊಡಿ ಕಾಲೇಜು ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ಶಿಸ್ತುಕ್ರಮ ಜರುಗಿಸುವ ಭರವಸೆ ನೀಡಿದರು. ಆದರೆ ಪ್ರಾಂಶುಪಾಲರು ನೀಡಿದ ಭರವಸೆಯನ್ನು ತಿರಸ್ಕರಿಸಿದ ವಿದ್ಯಾರ್ಥಿಗಳು ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ಸ್ಥಳಕ್ಕೆ ಕರೆಸಲೇಬೇಕೆಂದು ಪಟ್ಟು ಹಿಡಿದು ಬಿಸಿಲಲ್ಲೇ ಧರಣಿ ಕುಳಿತರು.

ಕುಂದಾಪುರ ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ನಡೆಸಿದರು. ಪಟ್ಟು ಬಿಡದ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಮುಂದುವರೆಸಿದರು. ಬಳಿಕ ಸ್ಥಳಕ್ಕಾಗಮಿಸಿದ ಸಿಪಿಐ ಗೋಪಿಕೃಷ್ಣ ವಿದ್ಯಾರ್ಥಿನಿಯರೊಂದಿಗೆ ಮಾತುಕತೆ ನಡೆಸಿದರು. ಕೆಲ ವಿದ್ಯಾರ್ಥಿ ಮುಖಂಡರನ್ನು ಕಾಲೇಜಿನೊಳಗೆ ಕರೆಸಿ ಪ್ರಾಂಶುಪಾಲರ ಸಮ್ಮುಖದಲ್ಲಿ ಸಭೆ ನಡೆಸಿದರು. ತಕ್ಷಣ ಸೇವೆಯಿಂದ ವಜಾಗೊಳಿಸಲು ಸಾಧ್ಯವಿಲ್ಲ. ಸ್ವಲ್ಪ ಕಾಲಾವಕಾಶ ಕೊಡಿ. ವಾರದೊಳಗೆ ಆತನನ್ನು ಸೇವೆಯಿಂದ ವಜಾಗೊಳಿಸುವುದಾಗಿ ಭರವಸೆ ನೀಡಿದರು. ಪ್ರಾಂಶುಪಾಲರ ಭರವಸೆಯ ಬಳಿಕವೂ ಧರಣಿ ಮುಂದುವರೆಸಿದ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ನಾಳೆಯೂ ತರಗತಿಗಳಿಗೆ ಹೋಗದೆ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.