ಬೆಂಗಳೂರು : ಕರ್ನಾಟಕ ವಿಧಾನಪರಿಷತ್ತಿನ 4 ಸ್ಥಾನ ಮತ್ತು ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣಾ ಆಯೋಗ ದಿನಾಂಕವನ್ನು ಘೋಷಿಸಿದೆ. ಜೂನ್ 10 ರಂದು ರಾಜ್ಯಸಭೆಗೆ ಚುನಾವಣೆ ನಡೆದರೆ, ವಿಧಾನಪರಿಷತ್ತಿಗೆ ಜೂನ್ 13 ರಂದು ಮತದಾನ ನಡೆಯಲಿದೆ.
ವಿಧಾನಪರಿಷತ್ ಚುನಾವಣೆ : ಎರಡು ಪದವೀಧರ ಕ್ಷೇತ್ರಗಳು ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 13ರಂದು ಮತದಾನ ನಡೆಯಲಿದ್ದು, ಜೂನ್ 15 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ನಾಲ್ಕು ಸ್ಥಾನಗಳಿಗೆ ಮೇ 19 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. ಮೇ 26 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೆ.ಟಿ ಶ್ರೀಕಂಠೇಗೌಡ, ಹನುಮಂತ ನಿರಾಣಿ, ಅರುಣ್ ಶಹಾಪುರ ಅವರ ಸದಸ್ಯತ್ವ ಜುಲೈ 4ಕ್ಕೆ ಅಂತ್ಯಗೊಳ್ಳಲಿದೆ.
ರಾಜ್ಯಸಭೆ ಚುನಾವಣೆ : ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕೆ.ಸಿ. ರಾಮಮೂರ್ತಿ, ಜೈರಾಂ ರಮೇಶ್ ಅವರಿಂದ ತೆರವಾಗಲಿರುವ ಮೂರು ಸ್ಥಾನ ಮತ್ತು ಆಸ್ಕರ್ ಫರ್ನಾಂಡೀಸ್ ಅವರ ನಿಧನದಿಂದ ತೆರವಾಗಲಿರುವ ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ.
ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣ, ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ಒಟ್ಟು 15 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಒಟ್ಟು 57 ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ ನಡೆಯಲಿದೆ.
ಮೇ 24 ರಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. ಜೂನ್ 1 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜೂನ್ 3 ಕೊನೆಯ ದಿನವಾಗಿದೆ. ಜೂನ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.










