ಬೆಂಗಳೂರು : ವಿಧಾನಸಭೆಯಲ್ಲಿ ರಾಗಿ ರಾಗಿ ಎಂದು ಘೋಷಣೆ ಕೂಗಿದ ಶಾಸಕ ರಂಗನಾಥ್ ವರ್ತನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗರಂ ಆದ ಪ್ರಸಂಗ ನಡೆಯಿತು.
ಶೂನ್ಯವೇಳೆಗೂ ಮುಂಚೆ ಎದ್ದು ನಿಂತ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ರಾಗಿ ಬೆಳೆಗಾರರ ಸಮಸ್ಯೆ ಕುರಿತಂತೆ ಸದನದಲ್ಲಿ ಪ್ರಸ್ತಾಪಕ್ಕೆ ಅವಕಾಶ ನೀಡುವಂತೆ ಒತ್ತಾಯ ಮಾಡಿದರು. ಅಷ್ಟೇ ಅಲ್ಲ ಭಿತ್ತಿಪತ್ರ ಕೈಯಲ್ಲಿ ಹಿಡಿದುಕೊಂಡು ರಾಗಿ, ರಾಗಿ ಎಂದು ಘೋಷಣೆ ಕೂಗಿದರು.
ಆಗ ರಂಗನಾಥ್ ವರ್ತನೆಗೆ ಸ್ಪೀಕರ್ ಕಾಗೇರಿ ಆಕ್ಷೇಪ ವ್ಯಕ್ತಪಡಿಸಿ ಸದನದಲ್ಲಿ ಅಸಭ್ಯವಾಗಿ ನಡೆದುಕೊಳ್ಳಬೇಡಿ. ರಾಗಿ ವಿಚಾರ ಪ್ರಮುಖವಾದದ್ದು ಎಂದು ಗೊತ್ತಿದೆ. ಮೂರು ಲಕ್ಷ ಟನ್ ಹೆಚ್ಚುವರಿ ಖರೀದಿಗೆ ಕೇಂದ್ರಕ್ಕೆ ಪ್ರಸ್ತಾವಣೆ ಸಲ್ಲಿಸುತ್ತೇವೆ ಎಂದು ಸರ್ಕಾರ ಹೇಳಿದೆ. ಉತ್ತರ ಬೇಕೆಂದರೆ ನಿಯಮಾವಳಿ ಪ್ರಕಾರ ನಡೆದುಕೊಳ್ಳಬೇಕು ಎಂದು ಸ್ಪೀಕರ್ ಸೂಚಿಸಿದರು. ಬಳಿಕ ರಂಗನಾಥ್ ಸುಮ್ಮನಾದರು.
ಮತ್ತೊಂದೆಡೆ ಆನೆ ದಾಳಿಯ ಬಗ್ಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೇಳಿದ ಪ್ರಶ್ನೆಗೆ ಉತ್ತರಿಸಲು 15 ದಿನ ಸಮಯ ಬೇಕು ಎಂದು ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಹೇಳಿದರು. ಸಚಿವರು ಸಮಯಾವಕಾಶ ಕೇಳಿದ್ದಕ್ಕೆ ಅಸಮಾಧಾನಗೊಂಡ ಶಾಸಕ ಅಪ್ಪಚ್ಚು ರಂಜನ್ ಆನೆ ಹಾವಳಿ ಹೆಚ್ಚಾಗಿದೆ. ಸರ್ಕಾರಕ್ಕೆ ಕಂಟ್ರೋಲ್ ಮಾಡಲು ಆಗಲ್ಲ ಅಂದರೆ ಹೇಳಿ, ನಾವೇ ನೋಡಿಕೊಳ್ಳುತ್ತೇವೆ ಎಂದು ಹೇಳಿದರು. ಸಚಿವರು ಉತ್ತರ ನೀಡೋದನ್ನು ತಪ್ಪಿಸಿಕೊಳ್ಳಲು ಈ ರೀತಿಯಾಗಿ ಸಮಯ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.










