ವಿಶೇಷ ಚೇತನ ಮಗುವಿನ ಪ್ರಯಾಣಕ್ಕೆ ಅನುಮತಿ ನೀಡದ ಇಂಡಿಗೋ ಸಂಸ್ಥೆಗೆ 5 ಲಕ್ಷ ರೂ. ದಂಡ…

69
firstsuddi

ನವದೆಹಲಿ : ರಾಂಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಚೇತನ ಮಗುವಿಗೆ ವಿಮಾನ ಪ್ರಯಾಣ ನಿರಾಕರಿಸಿದ್ದಕ್ಕಾಗಿ ಇಂಡಿಗೋ ವಿಮಾನಯಾನ ಸಂಸ್ಥೆಗೆ ಡಿಜಿಸಿಎ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಮೇ 7ರಂದು ವಿಶೇಷ ಚೇತನ ಮಗು ರಾಂಚಿ ವಿಮಾನ ನಿಲ್ದಾಣದಿಂದ ವಿಮಾನ ಹತ್ತಲು ತೆರಳಿದ್ದ ವೇಳೆ ಇಂಡಿಗೋ ವ್ಯವಸ್ಥಾಪಕರು ಬಿಟ್ಟಿರಲಿಲ್ಲ. ಇಂಡಿಗೋ ವಿಮಾನ ಯಾನ ಸಂಸ್ಥೆಯು ವಿಶೇಷ ಚೇತನ ಮಗುವಿನ ಪ್ರಯಾಣ ಮಾಡಲು ಅವಕಾಶ ನೀಡದ್ದರ ಬಗ್ಗೆ ಹಲವರು ಟೀಕೆ ವ್ಯಕ್ತಪಡಿಸಿದ್ದರು. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಹ ಈ ಘಟನೆಯನ್ನು ಟೀಕಿಸಿದ್ದರು. ಇದರ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಇಂಡಿಗೋ ಮೇ 9 ರಂದು ವಿಶೇಷ ಚೇತನ ಬಾಲಕನಿಗೆ ರಾಂಚಿ-ಹೈದರಾಬಾದ್ ವಿಮಾನವನ್ನು ಹತ್ತಲು ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿತ್ತು. ಬಾಲಕ ವಿಮಾನ ಹತ್ತುವ ಮುನ್ನ ಭಯಗೊಂಡಿದ್ದ. ಹೀಗಾಗಿ ವಿಮಾನ ಪ್ರಯಾಣಕ್ಕೆ ವಿಶೇಷ ಚೇತನ ಬಾಲಕನಿಗೆ ನಿರ್ಬಂಧ ವಿಧಿಸಿದ್ದೇವೆ ಎಂದು ಇಂಡಿಗೋ ತಿಳಿಸಿತ್ತು.

ಈ ಘಟನೆ ಕುರಿತು ತನಿಖೆ ನಡೆಸಲು ಡಿಜಿಸಿಎ ಮೇ 9ರಂದು ಮೂವರು ಸದಸ್ಯರ ತಂಡವನ್ನು ರಚಿಸಿತ್ತು. ವಿಚಾರಣೆ ನಡೆಸಿದಾಗ ಇಂಡಿಗೋ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ತಪ್ಪು ಕಂಡು ಬಂದಿತ್ತು. ಇದರ ಬೆನ್ನಲ್ಲೇ ನಾಗರಿಕ ವಿಮಾನಯಾನ ಸಂಸ್ಥೆ 5 ಲಕ್ಷ ರೂಪಾಯಿ ದಂಡ ವಿಧಿಸಿ, ಆದೇಶ ಹೊರಡಿಸಿದ್ದು, ವಿಶೇಷ ಸನ್ನಿವೇಶ ನಿಭಾಯಿಸುವಲ್ಲಿ ಇಂಡಿಗೋ ಏರ್​ಲೈನ್ ಸಿಬ್ಬಂದಿ ವಿಫಲರಾಗಿದ್ದಾರೆಂದು ತಿಳಿಸಿದೆ.