ಬೆಂಗಳೂರು : ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಸುದ್ದಿಗೋಷ್ಠಿ ನಡೆಸಿ ಮುಷ್ಕರ ವಾಪಾಸ್ ಪಡೆದಿರುವುದಾಗಿ ಘೋಷಿಸಿದ್ದಾರೆ.
ಏಪ್ರಿಲ್ 1ರಿಂದ ಶೇ.17ರಷ್ಟು ವೇತನ ಹೆಚ್ಚಿಸಿ ಎಂದು ಸರ್ಕಾರ ಆದೇಶ ನೀಡಿದೆ. ಈ ಸರ್ಕಾರದ ಆದೇಶವನ್ನು ಸಾಮೂಹಿಕವಾಗಿ ಒಪ್ಪಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭರವಸೆಗಳು ಸಿಗುತ್ತವೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಅವಧಿಯ ಮುಷ್ಕರವನ್ನು ವಾಪಸ್ ಪಡೆದಿದ್ದೇವೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಎಲ್ಲಾ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದರು.










