ಶಾಸಕರ ಪುತ್ರನ ಕಾರನ್ನು ಪರಿಶೀಲನೆ ಮಾಡದೆ ಹಾಗೆ ಬಿಟ್ಟು ಕಳಿಸಿದ ಅಧಿಕಾರಿಗಳು…

74
firstsuddi

ಚಿಕ್ಕೋಡಿ: ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರ ಪುತ್ರನ ಕಾರನ್ನು ಅಧಿಕಾರಿಗಳು ಪರಿಶೀಲನೆ ಮಾಡದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಹೊರವಲಯದ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಮಧ್ಯದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು, ಇಲ್ಲಿ ಪ್ರತಿಯೊಂದು ವಾಹನಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರ ಪುತ್ರ ಶ್ರೀನಿವಾಸ ಪಾಟೀಲ್ ಆಗಮಿಸುತ್ತಿದ್ದಂತೆ ಅಧಿಕಾರಿಗಳು ಅವರ ಕಾರನ್ನು ಪರಿಶೀಲನೆ ಮಾಡದೆ ಹಾಗೆ ಬಿಟ್ಟಿದ್ದಾರೆ. ಇದರಿಂದ ಕೆಲವು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೇಲಾಧಿಕಾರಿಗಳಿಗೆ ಮೌಖಿಕವಾಗಿ ದೂರು ಸಲ್ಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕಾಗವಾಡ ತಹಶೀಲ್ದಾರ್ ಎಂಎಂ ಬಳೇಗಾರ ಆಗಮಿಸಿ ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ. ಯಾಕೆ ಶಾಸಕರ ಮಗನ ವಾಹನವನ್ನು ತಪಾಸಣೆ ಮಾಡಿಲ್ಲ? ನಿಮಗೆ ನೋಟಿಸ್ ನೀಡಲಾಗುವುದು. ಪ್ರತಿಯೊಂದು ವಾಹನ ತಪಾಸಣೆ ಮಾಡುವಂತೆ ನಿಮಗೆ ಈಗಾಗಲೇ ಹೇಳಿದ್ದೇವೆ. ಆದರೂ ನೀವು ಕರ್ತವ್ಯ ಲೋಪ ಮಾಡಿದ್ದೀರಿ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.