ಶಿಕ್ಷಣ ನಮ್ಮನ್ನು ದೈವಿಕತೆಯೆಡೆಗೆ ಕೊಂಡೊಯ್ಯುವ ಸಾಧನ : ಹೆಚ್.ಎಸ್.ಸತ್ಯನಾರಾಯಣ

69
firstsuddi

ಚಿಕ್ಕಮಗಳೂರು : ವಿದ್ಯಾರ್ಥಿ ಜೀವನ ಮೋಜು ಮಸ್ತಿಯ ಸಮಯವಲ್ಲ ಅದು ತಪಸ್ಸಿನ ಕಾಲ ಎಂದು ಸಾಹಿತಿ, ವಿಮರ್ಶಕ ಡಾ|| ಹೆಚ್.ಎಸ್.ಸತ್ಯನಾರಾಯಣ ಹೇಳಿದರು.

ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ನಿನ್ನೆ ನಡೆದ ಪರ್ವತವರ್ಧನ ಎಂ.ಎಲ್.ವಾಸುದೇವ ಮೂರ್ತಿ ಪ್ರೌಢಶಾಲೆಯ 65ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವೆಂದರೆ ತಪಸ್ಸು, ಅದು ನಮ್ಮನ್ನು ದೈವಿಕತೆಯೆಡೆಗೆ ಕೊಂಡೊಯ್ಯುವ ಸಾಧನ ಹಾಗಾಗಿ ಅದನ್ನು ಹಗುರವಾಗಿ ಕಾಣಬಾರದು, ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿ ಮೊಬೈಲ್, ಟಿ.ವಿ.ಗಳಂತಹ ಯಾವುದೇ ಆಕರ್ಷಣೆಗಳಿಗೆ ಒಳಗಾಗದೇ ಸದಾ ಅಧ್ಯಯನ ನಿರತರಾಗಬೇಕು ಎಂದು ಕಿವಿಮಾತು ಹೇಳಿದರು.

ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳೆಲ್ಲವೂ ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ, ಅವು ಅಗತ್ಯ ಆದರೆ ಅವೇ ಊಟವಲ್ಲ, ಶಿಕ್ಷಣವೇ ಪರಿಪೂರ್ಣವಾದ ಊಟ ಎಂದ ಅವರು ವಿದ್ಯಾರ್ಥಿಗಳು ಇದನ್ನು ಅರಿತು ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು, ಉತ್ತಮ ಫಲಿತಾಂಶದ ಮೂಲಕ ಹೆತ್ತವರು ಮತ್ತು ಶಿಕ್ಷಕರ ಶ್ರಮದ ಋಣ ತೀರಿಸಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೆಚ್.ಕೆ.ತಾರಾನಾಥ್ ಮಾತನಾಡಿ ವಿದ್ಯಾರ್ಥಿಗಳು ತಮ್ಮನ್ನು ಕಷ್ಟಪಟ್ಟು ಓದಿಸಿದ ತಂದೆ ತಾಯಿಗಳಿಗೆ ಗೌರವ ತರುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ವಿದ್ಯೆ ಸಾಧಕರ ಸೊತ್ತು, ಶ್ರದ್ಧೆ ಮತ್ತು ಪರಿಶ್ರಮದಿಂದ ಮಾತ್ರ ಅದನ್ನು ಗಳಿಸಲು ಸಾಧ್ಯ ಎಂದರು.

ಮುಖ್ಯ ಶಿಕ್ಷಕ ಬಿ.ಎಂ.ಲೋಕೇಶ್ ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಕ್ರೀಡೋತ್ಸವವನ್ನು ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಉಮಾ ಪ್ರಶಾಂತ್ ಉದ್ಘಾಟಿಸಿದರು.

ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಜಯಶ್ರೀ ಜೋಶಿ, ಸಂಸ್ಥೆಯ ಕಛೇರಿ ವ್ಯವಸ್ಥಾಪಕಿ ಶ್ರೀಲಕ್ಷ್ಮೀ, ಶಿಕ್ಷಕರಾದ ಜಿ.ಬಿ.ಸುರೇಶ್, ಹೆಚ್.ಎನ್.ಸತೀಶ್, ಎನ್.ರೂಪ ಉಪಸ್ಥಿತರಿದ್ದರು.