ಶುಲ್ಕ ಹೆಚ್ಚಳ – ಸಿ.ಟಿ.ರವಿ ಭೇಟಿ ಮಾಡಿದ ವರ್ತಕರ ಸಂಘ…

78
firstsuddi

ಚಿಕ್ಕಮಗಳೂರು : ವ್ಯಾಪಾರ ಪರವಾನಗಿ ನವೀಕರಣ ಶುಲ್ಕ, ಕಟ್ಟಡ ಕಂದಾಯ ಮತ್ತು ಕಸದ ಗಾಡಿಯ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿರುವ ನಗರಸಭೆಯ ಕ್ರಮವನ್ನು ವರ್ತಕರ ಸಂಘ ವಿರೋಧಿಸಿದೆ.

ಶಾಸಕ ಸಿ.ಟಿ.ರವಿ ಅವರನ್ನು ಇಂದು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು ಶುಲ್ಕ ಹೆಚ್ಚಳದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವ್ಯಾಪಾರ ಪರವಾನಗಿ ನವೀಕರಣ ಶುಲ್ಕ, ಕಟ್ಟಡ ಕಂದಾಯ ಮತ್ತು ಕಸದ ಗಾಡಿಗಳ ಶುಲ್ಕವನ್ನು ನಗರಸಭೆ ವರ್ತಕರ ಮತ್ತು ನಾಗರೀಕರ ಗಮನಕ್ಕೆ ತಾರದೇ ಏಕಾಏಕಿ ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿದೆ, ಇದರಿಂದಾಗಿ ನಾಗರೀಕರಿಗೆ ಹೆಚ್ಚಿನ ಹೊರೆಯಾಗಿದೆ ಎಂದು ಆರೋಪಿಸಿದರು.

ಕಸ ಸಂಗ್ರಹ ಗಾಡಿಗಳು ಪ್ರತಿದಿನ ಬಾರದೇ ಬೇಕಾಬಿಟ್ಟಿ ಕಸ ಸಂಗ್ರಹ ಮಾಡುತ್ತಿರುವುದರಿಂದಾಗಿ ನಾಗರೀಕರು ಪರದಾಡುವಂತಾಗಿದೆ, ನಗರದ ಅನೇಕ ರಸ್ತೆಗಳು ಗುಂಡಿ ಗೊಟರಿನಿಂದ ಕೂಡಿದ್ದು, ಡಾಂಬರೀಕರಣವಾಗದೇ ಜನ ಮತ್ತು ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ, ಇದರ ನಡುವೆ ಶುಲ್ಕಗಳನ್ನು ಏಕಾಏಕಿ ಹೆಚ್ಚಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಂಗಡಿ ಮಾಲೀಕರು ಬೀಡಿ ಸಿಗರೇಟ್ ವ್ಯಾಪಾರಕ್ಕೆ ಪ್ರತ್ಯೇಕ ಪರವಾನಗಿ ಪಡೆಯುವಂತೆ ರಾಜ್ಯ ಸರ್ಕಾರ ಕಾನೂನು ರೂಪಿಸಲು ಮುಂದಾಗಿರುವುದರಿಂದಾಗಿ ಸಣ್ಣ ವ್ಯಾಪಾರಸ್ಥರು ಸಂಕಷ್ಟಕ್ಕೀಡಾಗುತ್ತಾರೆ ಎಂದು ದೂರಿದರು.

ಬೀಡಿ ಸಿಗರೇಟ್ ವ್ಯಾಪಾರಕ್ಕೆ ಈಗಿರುವ ಪದ್ದತಿಯನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು. ವರ್ತಕರ ಸಂಘದ ಅಧ್ಯಕ್ಷ ಟಿ.ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಕೆ.ಎಸ್.ನಾಗೇಶ್, ಕಾರ್ಯದರ್ಶಿ ತನೋಜ್ ಕುಮಾರ್, ಖಜಾಂಚಿ ಸತೀಶ್, ಜಂಟಿ ಕಾರ್ಯದರ್ಶಿ ಸಿ.ಆರ್.ರಮೇಶ್, ಸಲಹೆಗಾರ ಸಿ.ಎಸ್.ಶಿವಪ್ರಕಾಶ್, ಹರೀಶ್, ಅಶೋಕ್, ನಾಗರಾಜ್ ಹಾಜರಿದ್ದರು.